ಗುವಾಹಟಿ: ಕಾಂಗ್ರೆಸ್ ಪಕ್ಷವು ದೇಶದ ಸೇನೆಯನ್ನು ಬೆಂಬಲಿಸುವ ಬದಲು ಪಾಕಿಸ್ತಾನದಿಂದ ಪೋಷಿಸಲ್ಪಟ್ಟ ಭಯೋತ್ಪಾದಕರಿಗೆ ಬೆಂಬಲ ಒದಗಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದ್ದಾರೆ.
ಅಸ್ಸಾಂನ ದರ್ರಾಂಗ್ ಜಿಲ್ಲೆಯ ಮಂಗಲ್ಡೋಯ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಒಳನುಸುಳುಕೋರರು ಮತ್ತು ರಾಷ್ಟ್ರವಿರೋಧಿ ಶಕ್ತಿಗಳನ್ನು ರಕ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆಸಿದ 'ಆಪರೇಷನ್ ಸಿಂಧೂರ' ಸಮಯದಲ್ಲಿ, ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗು ತಾಣಗಳನ್ನು ನಮ್ಮ ಸಶಸ್ತ್ರ ಪಡೆಗಳು ನಾಶಪಡಿಸಿದ್ದವು. ಆದರೆ ಕಾಂಗ್ರೆಸ್ ನಮ್ಮ ಸೇನೆಯನ್ನು ಬೆಂಬಲಿಸುವ ಬದಲು ಒಳನುಸುಳುವವರು ಮತ್ತು ರಾಷ್ಟ್ರವಿರೋಧಿ ಶಕ್ತಿಗಳನ್ನು ರಕ್ಷಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಮೋದಿ ಕಿಡಿಕಾರಿದ್ದಾರೆ.
ಕಾಮಾಕ್ಯ ಮಾತೆಯ ಆಶೀರ್ವಾದದಿಂದ 'ಆಪರೇಷನ್ ಸಿಂಧೂರ' ಯಶಸ್ವಿಯಾಗಿದೆ ಎಂದ ಮೋದಿ, ಈ ಪವಿತ್ರ ಭೂಮಿಯಲ್ಲಿ ಉಪಸ್ಥಿತರಿರುವುದು ಗೌರವ ತಂದಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ತೊಡಕಾಗುವ, ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಅವಮಾನಿಸುವ ಹಾಗೂ ಜನಸಂಖ್ಯೆ ಬದಲಾವಣೆ ಮಾಡಲು ಪಿತೂರಿ ನಡೆಸುವ ರಾಷ್ಟ್ರವಿರೋಧಿ ಶಕ್ತಿಗಳನ್ನು ಬಿಜೆಪಿ ಅನುಮತಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ ಎಂದು ಪ್ರತಿಪಾದಿಸಿದ ಮೋದಿ, ಈ ವೇಳೆ ಅಸ್ಸಾಂನ ಅಭಿವೃದ್ಧಿಯು ಪ್ರಮಾಣ ಶೇ 13ರಷ್ಟಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯದ ₹6,300 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ.




