ಲೇಹ್: ಲಡಾಕ್‌ಗೆ ಪ‍್ರತ್ಯೇಕ ರಾಜ್ಯದ ಸ್ಥಾನಮಾನ ಹಾಗೂ ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯಿಸಿ ನಡೆದ ಪ್ರತಿಭಟನೆಗಳಿಂದ ನಾಲ್ವರು ಸಾವನ್ನಪ್ಪಿ 90 ಮಂದಿ ಗಾಯಗೊಂಡ ಎರಡು ದಿನಗಳ ಬಳಿಕ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಮಧ್ಯಾಹ್ನ 2.30ಕ್ಕೆ ಲಡಾಕ್ ಡಿಜಿಪಿ ಎಸ್.ಡಿ.ಸಿಂಗ್ ಜಾಮ್ವಾಲ್ ನೇತೃತ್ವದ ತಂಡ ಸೋನಮ್ ವಾಂಗ್ಚುಕ್ ಅವರನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋನಮ್ ವಾಂಗ್ಚುಕ್ ಬಂಧನ ಸ್ವೀಕಾರಾರ್ಹವಲ್ಲ: ರಾಹುಲ್ ಗಾಂಧಿಉನ್ನತ ನಾಯಕತ್ವದ ಭೇಟಿಗೆ ಕಾದಿದ್ದೇವೆ: ಸೋನಮ್ ವಾಂಗ್ಚುಕ್
ವಾಂಗ್ಚುಕ್ ವಿರುದ್ಧ ಯಾವ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಕಳೆದ ಐದು ವರ್ಷಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಂಘಟನೆಯ ಪ್ರಮುಖ ಸದಸ್ಯರಾಗಿರುವ ವಾಂಗ್ಚುಕ್ ಅವರು ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂದು ಗೃಹ ಸಚಿವಾಲಯ ಆರೋಪ ಮಾಡಿತ್ತು.
ಆದರೆ ಕೇಂದ್ರ ಸರ್ಕಾರದ ಆರೋಪವನ್ನು ಸೋನಮ್ ವಾಂಗ್ಚುಕ್ ತಳ್ಳಿ ಹಾಕಿದ್ದಾರೆ. ಬುಧವಾರ ನಡೆದ ಹಿಂಸಾಚಾರದ ಬಳಿಕ ಸೋನಮ್ ವಾಂಗ್ಚುಕ್ ಸತ್ಯಾಗ್ರಹವನ್ನು ವಾಪಸ್ ಪಡೆದಿದ್ದಾರೆ.
ಲಡಾಕ್‌ನಲ್ಲಿ ಒಟ್ಟಾರೆ ಪರಿಸ್ಥಿತಿಯೂ ಶಾಂತಿಯುತವಾಗಿದೆ. ಅಗತ್ಯ ವಸ್ತುಗಳ ಖರೀದಿಸಲು ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶಾಲಾ- ಕಾಲೇಜುಗಳು ಬಂದ್: ಶುಕ್ರವಾರದಿಂದ ಮುಂದಿನ ಎರಡು ದಿನಗಳವರೆಗೂ ಸರ್ಕಾರಿ, ಖಾಸಗಿ ಶಾಲೆಗಳು, ಕಾಲೇಜುಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಲೇಹ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರೊಮಿಲ್ ಸಿಂಗ್ ಡೊಂಕ್ ಆದೇಶ ಹೊರಡಿಸಿದ್ದಾರೆ. ಅಂಗನವಾಡಿ ಕೇಂದ್ರಗಳು ಕೂಡ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೇಡಿಕೆಗಳು ಏನು: ಲಡಾಕ್‌ಗೆ ಪ‍್ರತ್ಯೇಕ ರಾಜ್ಯದ ಸ್ಥಾನಮಾನ, ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯ, ಲೇಹ್, ಕಾರ್ಗಿಲ್‌ಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ, ರಾಜ್ಯ ಲೋಕಸೇವಾ ಆಯೋಗ ಸ್ಥಾಪಿಸುವುದು ಪ್ರಮುಖ ಬೇಡಿಕೆಗಳಾಗಿವೆ ಎಂದು ಎಲ್‌ಎಬಿ ಹಾಗೂ ಕೆಡಿಎ ಪ್ರತಿಪಾದಿಸಿವೆ.




