HEALTH TIPS

ಸಲಹುವ ಸಾಮರ್ಥ್ಯ ಇಲ್ಲದಿದ್ದರೆ ಬಹುಪತ್ನಿತ್ವ ಒಪ್ಪಲಾಗದು: ಕೇರಳ ಹೈಕೋರ್ಟ್‌

 ಕೊಚ್ಚಿ: 'ಪತ್ನಿಯರನ್ನು ಸಲಹುವ ಸಾಮರ್ಥ್ಯ ಇಲ್ಲದಿದ್ದರೆ ಮುಸ್ಲಿಂ ಪುರುಷನೊಬ್ಬ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್‌ಮಣ್ಣ ನಿವಾಸಿ 39 ವರ್ಷದ ಮಹಿಳೆಯೊಬ್ಬರು, ಭಿಕ್ಷಾಟನೆಯಿಂದ ಜೀವನ ನಿರ್ವಹಣೆ ಮಾಡುತ್ತಿರುವ ತನ್ನ ಪತಿಯಿಂದ ಪ್ರತಿ ತಿಂಗಳು ₹10 ಸಾವಿರ ಜೀವನಾಂಶ ಕೋರಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. 


ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್‌, 'ಮುಸ್ಲಿಂ ಪುರುಷನೊಬ್ಬನಿಗೆ ತನ್ನ ಪತ್ನಿಯರನ್ನು ನೋಡಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಮತ್ತು ಆತನ ಪತ್ನಿಯರಲ್ಲಿ ಒಬ್ಬರು ಜೀವನಾಂಶಕ್ಕಾಗಿ ಕೋರ್ಟ್‌ ಮೊರೆ ಹೋಗುತ್ತಾರೆ ಎನ್ನುವುದಾದರೆ ಆತನ ಬಹುಪತ್ನಿತ್ವವನ್ನು ಒಪ್ಪಲು ಸಾಧ್ಯವಿಲ್ಲ' ಎಂದಿದ್ದಾರೆ.

ದೂರುದಾರ ಮಹಿಳೆ ಮೊದಲು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅಲ್ಲಿ ಆಕೆಯ ಮನವಿಯನ್ನು ತಳ್ಳಿಹಾಕಿದಾಗ, ಹೈಕೋರ್ಟ್ ಮೆಟ್ಟಿಲೇರಿದ್ದರು. 'ಪಾಲಕ್ಕಾಡ್‌ನ ಕುಂಬಡಿ ಗ್ರಾಮದ 44 ವರ್ಷದ ನನ್ನ ಪತಿಯು ಭಿಕ್ಷಾಟನೆಯಿಂದ ಜೀವಿಸುತ್ತಿದ್ದು, ತಿಂಗಳಿಗೆ ₹25 ಸಾವಿರ ಆದಾಯವಿದೆ. ಆದರೆ, ನನಗೆ ಜೀವನಾಂಶ ನೀಡುತ್ತಿಲ್ಲ' ಎಂದು ದೂರಿದ್ದರು.

ದೂರುದಾರ ಮಹಿಳೆಯ ವಾದ ಆಲಿಸಿದ ನ್ಯಾಯಮೂರ್ತಿ, 'ಭಿಕ್ಷಾಪಾತ್ರೆಗೆ ಕೈ ಹಾಕಲು ಹೋಗಬೇಡಿ' ಎನ್ನುವ ಮಲಯಾಳಂ ನುಡಿಗಟ್ಟೊಂದನ್ನು ಬಳಸಿದರು. ಈ ಪ್ರಕರಣಕದಲ್ಲಿ 'ಪತ್ನಿಗೆ ಜೀವನಾಂಶ ನೀಡುವಂತೆ ಭಿಕ್ಷುಕನಿಗೆ ಕೋರ್ಟ್‌ ನಿರ್ದೇಶಿಸುವಂತಿಲ್ಲ. ಆದರೆ, ದೂರುದಾರ ಮಹಿಳೆಗೆ ಆಹಾರ, ಬಟ್ಟೆಗಳನ್ನು ಒದಗಿಸಲಾಗಿದೆಯೇ ಎನ್ನುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು' ಎಂದರು.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಆದೇಶದ ಪ್ರತಿಯನ್ನು ನೀಡುವಂತೆ ಸೂಚಿಸಿದ ಕೋರ್ಟ್‌, ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿತು.

'ಏಕಪತ್ನಿತ್ವ: ಜಾಗೃತಿ ಮೂಡಿಸಬೇಕು': 

ಅಂಧನಾಗಿದ್ದು ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದರೂ ಎರಡನೆಯ ಪತ್ನಿಯನ್ನೂ ತೊರೆದು ಇನ್ನೊಂದು ಮದುವೆಯಾಗಲು ಹೊರಟ ಪುರುಷನಿಗೆ ಕೋರ್ಟ್‌ ಛೀಮಾರಿ ಹಾಕಿತು. 'ಒಂದಕ್ಕಿಂತ ಹೆಚ್ಚು ಮದುವೆಯಾಗಲು ನಿಮ್ಮ ಸಮುದಾಯದ ಸಾಂಪ್ರದಾಯಿಕ ಕಾನೂನು ಅವಕಾಶ ಕಲ್ಪಿಸಬಹುದು. ಆದರೆ ಪತ್ನಿಯರನ್ನು ನೋಡಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಇದನ್ನು ಒಪ್ಪಲು ಸಾಧ್ಯವಿಲ್ಲ' ಎಂದಿತು. ಬಹುತೇಕ ಮುಸ್ಲಿಮರು ಏಕಪತ್ನಿತ್ವವನ್ನೇ ಅನುಸರಿಸುತ್ತಾರೆ. ಇದು ಕುರಾನ್‌ನ ನಿಜವಾದ ಆಶಯವನ್ನು ಪ್ರತಿಬಿಂಬಿಸುತ್ತದೆ. ಕೆಲವರಷ್ಟೇ ಬಹುಪತ್ನಿತ್ವ ಹೊಂದಿದ್ದಾರೆ. ಸಮುದಾಯ ಮತ್ತು ಧಾರ್ಮಿಕ ಮುಖಂಡರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries