ವಾಟ್ಸ್‌ಆಯಪ್ 'ಆಸ್ಕ್ ಮೆಟಾ ಎಐ' ಎಂಬ ಹೊಸ ಶಾರ್ಟ್‌ಕಟ್ ಅನ್ನು ಪರೀಕ್ಷಿಸುತ್ತಿದೆ. ಈ ಸೌಲಭ್ಯವು ಬಳಕೆದಾರರಿಗೆ ಚಾಟ್‌ನಲ್ಲಿನ ನಿರ್ದಿಷ್ಟ ಸಂದೇಶಗಳ ಬಗ್ಗೆ ನೇರವಾಗಿ AI ಬಳಸಿ ಪ್ರಶ್ನೆ ಕೇಳಲು ಮತ್ತು ಸ್ಪಷ್ಟನೆ ಪಡೆಯಲು ಅನುವು ಮಾಡಿಕೊಡುತ್ತದೆ.
ಐಫೋನ್ ಬಳಕೆದಾರರಿಗೆಂದೇ ವಾಟ್ಸ್‌ಆಯಪ್ ಇದೀಗ ಆಸ್ಕ್ ಮೆಟಾ ಎಐ ಎಂಬ ಶಾರ್ಟ್‌ಕಟ್ ಅನ್ನು ಪರಿಚಯಿಸಲು ಮುಂದಾಗಿದೆ.
ಈ ಮೂಲಕ ವಾಟ್ಸಪ್ ಬಳಕೆದಾರರು ಚಾಟ್ ನಡೆಸುತ್ತಿರುವಾಗಲೇ ಮೆಟಾ ಎಐಗೆ ನಿರ್ದಿಷ್ಟ ಮೆಸೇಜ್‌ಗಳ ಕುರಿತು ನೇರವಾಗಿ ಪ್ರಶ್ನೆಗಳನ್ನು, ಸ್ಪಷ್ಟನೆಗಳನ್ನು ಕೇಳಲು, ಫ್ಯಾಕ್ಟ್‌ಚೆಕ್ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.

ಈ ಕುರಿತು ಐಒಎಸ್‌ನ 25.26.10.71ನೇ ಆವತ್ತಿಯ ವಾಟ್ಸ್‌ಆಯಪ್ ಬೆಟಾಗೆ ಟೆಸ್ಟಿಂಗ್ ಕೂಡ ಆರಂಭವಾಗಿದೆ. ಐಫೋನ್ ಬಳಕೆದಾರರಲ್ಲಿ ಸದ್ಯ ಕೆಲವರಿಗಷ್ಟೇ ಈ ಹೊಸ ಸೌಲಭ್ಯ ಪ್ರಯೋಗಾರ್ಥವಾಗಿ ಲಭ್ಯವಾಗಲಿದೆ. ವಿಶೇಷವೆಂದರೆ ಎಐ ಶಾರ್ಟ್‌ಕಟ್ ಅನ್ನು ತೆರೆದ ಕೂಡಲೇ ಎಲ್ಲಾ ಮೆಸೇಜ್ ಎಐಗೆ ಹೋಗುವುದಿಲ್ಲ.
ಬಳಕೆದಾರರು ನಿರ್ದಿಷ್ಟ ಮೆಸೇಜ್ ಅನ್ನು ಆಯ್ಕೆ ಮಾಡಬೇಕು ಮತ್ತು ತಾವು ಏನು ಕೇಳಲು ಬಯಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಮೂಲಕ ಬಳಕೆದಾರರ ಖಾಸಗಿತನ ಮತ್ತು ಪ್ಲಾಟ್‌ಫಾರ್ಮ್ ಮೇಲಿನ ನಂಬಿಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ವಾಟ್ಸ್‌ಆಯಪ್ ತೆರೆದು ಯಾವುದೇ ಸಂದೇಶದ ಮೇಲೆ ದೀರ್ಘವಾಗಿ ಪ್ರೆಸ್ ಮಾಡಿದರೆ ಮೇಲ್ಭಾಗದಲ್ಲಿ ಫಾರ್ವರ್ಡ್, ರಿಪ್ಲೈ, ಸ್ಟಾರ್, ಅಪ್ಡೇಟ್‌ನಂಥ ಆಪ್ಷನ್ ಕಾಣುತ್ತದೆ. ಇದೀಗ ಅದರ ಜತೆಗೆ 'ಆಸ್ಕ್ ಮೆಟಾ ಎಐ' ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದನ್ನು ಆಯ್ಕೆ ಮಾಡಿದರೆ ಪ್ರತ್ಯೇಕ ಎಐ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿದ ಸಂದೇಶ ಕಾಣಸಿಗುತ್ತದೆ. ಬಳಕೆದಾರರು ಕೇಳುವ ಪ್ರಶ್ನೆಗೆ ಅನುಗುಣವಾಗಿ ಎಐ ಫಲಿತಾಂಶವನ್ನು ಪ್ರದರ್ಶಿಸುತ್ತದೆ.




