HEALTH TIPS

ಅಪಾಯಕಾರಿ ವನ್ಯಪ್ರಾಣಿಗಳ ಹತ್ಯೆಗೆ ಅನುಮತಿಸುವ ಕರಡು ಶಾಸನಕ್ಕೆ ಕೇರಳ ಸಂಪುಟದ ಅನುಮೋದನೆ

ತಿರುವನಂತಪುರಂ: ಕೇರಳದಲ್ಲಿ ಪ್ರಮುಖ ಚರ್ಚೆಗೆ ಕಾರಣವಾಗಬಹುದಾದ ನಿರ್ಧಾರವೊಂದರಲ್ಲಿ ರಾಜ್ಯ ಸಂಪುಟವು ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ವನ್ಯಪ್ರಾಣಿಗಳ ಹತ್ಯೆ ಮಾಡಲು ಕರಡು ಶಾಸನಕ್ಕೆ ಹಸಿರು ನಿಶಾನೆಯನ್ನು ತೋರಿಸಿದೆ. ನೂತನ ಶಾಸನವು ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.

ಶನಿವಾರ ನಡೆದ ವಿಶೇಷ ಸಂಪುಟ ಸಭೆಯು ಇಂತಹ ವನ್ಯಪ್ರಾಣಿಗಳು ಯಾವುದೇ ಪರಿಚ್ಛೇದದಲ್ಲಿ ಸೇರಿದ್ದರೂ ಅವುಗಳ ಹತ್ಯೆಗೆ ಅನುಮತಿಸುವ ಕರಡು ಶಾಸನವನ್ನು ಅನುಮೋದಿಸಿದೆ. ನೂತನ ಶಾಸನವು ಕೇಂದ್ರ ಶಾಸನ ವನ್ಯಜೀವಿ ರಕ್ಷಣಾ ಕಾಯ್ದೆ 1972ಕ್ಕೆ ತಿದ್ದುಪಡಿಯ ರೂಪದಲ್ಲಿ ಬರಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕರಡಿನ ಪ್ರಕಾರ ಮುಖ್ಯ ವನ್ಯಜೀವಿ ಸಂರಕ್ಷಕರು ಇಂತಹ ಹತ್ಯೆಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಹೊಂದಿರಲಿದ್ದಾರೆ. ಮಸೂದೆಯು ಅಸ್ತಿತ್ವದಲ್ಲಿರುವ ಅರಣ್ಯ ಕಾನೂನುಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾವಿಸಿದ್ದು, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲ್ಪಡುವ ನಿರೀಕ್ಷೆಯಿದೆ. ಖಾಸಗಿ ಭೂಮಿಯಲ್ಲಿನ ಶ್ರೀಗಂಧದ ಮರಗಳನ್ನು ಕಡಿಯಲು ಅವಕಾಶ ನೀಡುವ ನಿಬಂಧನೆಗಳು ಸೇರಿದಂತೆ ಅರಣ್ಯ ಇಲಾಖೆಯಿಂದ ಕರಡು ಮಸೂದೆಗಳಿಗೂ ಸಂಪುಟವು ಅನುಮೋದನೆ ನೀಡಿದೆ. ಅರಣ್ಯ ಪರಿಸರ-ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಲ್ಲಿ ಈ ಪ್ರಸ್ತಾವಗಳ ಕುರಿತು ಹೆಚ್ಚಿನ ಚರ್ಚೆಗಳು ನಡೆಯಲಿವೆ.

ರಾಜ್ಯ ಸರಕಾರವು ಕಾನೂನು ಸಲಹೆಯ ಮೇರೆಗೆ ವನ್ಯಜೀವಿ ರಕ್ಷಣಾ ಕಾಯ್ದೆ,1972ಕ್ಕೆ ತಿದ್ದುಪಡಿ ತರುವುದನ್ನು ಪರಿಗಣಿಸುತ್ತಿದೆ ಎಂದು ಕಾನೂನು ಸಚಿವ ಪಿ.ರಾಜೀವ ಅವರು ಇತ್ತೀಚಿಗೆ ಸುಳಿವು ನೀಡಿದ್ದರು. ತನ್ಮೂಲಕ ಮುಖ್ಯ ವನ್ಯಜೀವಿ ಸಂರಕ್ಷಕರು ಮಾನವರಿಗೆ ಗಂಭೀರ ಗಾಯಗಳನ್ನುಂಟು ಮಾಡುವ ಅಥವಾ ಸಾರ್ವಜನಿಕ ಸ್ಥಳಕ್ಕೆ ಬೆದರಿಕೆಯೊಡ್ಡುವ ವನ್ಯಪ್ರಾಣಿಯನ್ನು ಕೊಲ್ಲಲು ಅಥವಾ ಸೆರೆಹಿಡಿಯಲು ಯಾವುದೇ ವ್ಯಕ್ತಿಗೆ ಅನುಮತಿ ನೀಡಬಹುದು. ಪ್ರಸ್ತುತ ಶಾಸನಾತ್ಮಕ ಚೌಕಟ್ಟು ತುರ್ತು ಸಂದರ್ಭಗಳಲ್ಲಿ ಮಾನವ ಜೀವಗಳನ್ನು ರಕ್ಷಿಸಲು ಸಾಕಾಗುವುದಿಲ್ಲ,ಹೀಗಾಗಿ ಸರಕಾರವು ನೂತನ ಶಾಸನವನ್ನು ತರಲಿದೆ ಎಂದು ಅವರು ಹೇಳಿದ್ದರು.

ಆದರೆ ಕೇಂದ್ರದ ಶಾಸನಕ್ಕೆ ತಿದ್ದುಪಡಿ ತರುವುದು ರಾಜ್ಯ ಸರಕಾರಕ್ಕೆ ಸುಲಭದ ತುತ್ತಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries