ದೀರ್ ಅಲ್-ಬಲಾಹ್: ಗಾಜಾದ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಹಮಾಸ್‌ನ ಸಶಸ್ತ್ರ ಪಡೆಗಳ ವಕ್ತಾರ ಅಬು ಒಬೈದಾ ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ಭಾನುವಾರ ಘೋಷಿಸಿದ್ದಾರೆ.
'ಗಾಜಾ ನಗರದ ಮೇಲೆ ಇಸ್ರೇಲ್ ಪಡೆಗಳು ಹೊಸ ದಾಳಿ ಆರಂಭಿಸಿವೆ.
ಹೀಗಾಗಿ ನಗರವನ್ನು ಯುದ್ಧವಲಯ ಎಂದು ಘೋಷಿಸಲಾಗುತ್ತಿದೆ' ಎಂದು ಒಬೈದಾ ಶುಕ್ರವಾರ ಹೇಳಿದ್ದರು. ಇದೇ ಅವರ ಕೊನೆಯ ಹೇಳಿಕೆಯಾಗಿತ್ತು. ಇದೀಗ ಅವರ ಹತ್ಯೆಯ ವಿಚಾರವನ್ನು ಇಸ್ರೇಲ್ ಘೋಷಿಸಿದೆ.
ಆದರೆ, ಹಮಾಸ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಮಾಸ್ ನಾಯಕರನ್ನು ಹೊಡೆದುರುಳಿಸಲು ಪಣತೊಟ್ಟಿರುವ ಇಸ್ರೇಲ್ ಪಡೆಗಳು ಈಗಾಗಲೇ ಹಮಾಸ್‌ನ ಹಲವು ನಾಯಕರನ್ನು ಹತ್ಯೆಗೈದಿವೆ. ಈ ಸಾಲಿಗೆ ಈಗ ಒಬೈದಾ ಕೂಡ ಸೇರಿದಂತಾಗಿದೆ.
ಗಾಜಾ ಪಟ್ಟಣದ ವಿವಿಧ ಭಾಗಗಳಲ್ಲಿ ಇಸ್ರೇಲ್ ಪಡೆಗಳು ನಡೆಸುತ್ತಿರುವ ದಾಳಿಯಿಂದಾಗಿ ಶನಿವಾರದಿಂದ 43 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಶಿಫಾ ಆಸ್ಪತ್ರೆಯೊಂದರಲ್ಲೇ ಶವಾಗಾರಕ್ಕೆ 29 ಮೃತದೇಹಗಳನ್ನು ತರಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ನೆರವು ಕೇಂದ್ರಗಳ ಬಳಿಯೇ ಇಸ್ರೇಲ್ ಪಡೆಗಳು ಹೆಚ್ಚಿನ ದಾಳಿ ನಡೆಸುತ್ತಿವೆ ಎಂದೂ ಅಧಿಕಾರಿಗಳು ದೂರಿದ್ದಾರೆ.




