ತಿರುವನಂತಪುರಂ: ಇಂದು ಪಂಪಾದಲ್ಲಿ ನಡೆದ ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಬಿಜೆಪಿಯ ವಿರೋಧ ಮುಂದುವರಿದಿದ್ದರೂ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ ಪತ್ರ ಬರೆದು ಸಂಚಲನ ಮೂಡಿಸಿದರು.
ಕೇರಳ ರಾಜ್ಯ ಸರ್ಕಾರ ಅಯ್ಯಪ್ಪ ಸಂಗಮಕ್ಕೆ ಕಳುಹಿಸಿದ್ದ ಆಹ್ವಾನವನ್ನು ಸ್ವೀಕರಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಶುಭ ಹಾರೈಸಿದ್ದಾರೆ. ಜಾಗತಿಕ ಅಯ್ಯಪ್ಪ ಸಂಗಮವು ಶಬರಿಮಲೆಯ ಲಕ್ಷ್ಯಗಳನ್ನು ಸಾಧಿಸಲು ಸಹಾಯ ಮಾಡಲಿ ಎಂದು ಯೋಗಿ ಹೇಳಿರುವರು.
'ಅಯ್ಯಪ್ಪ ಧರ್ಮದ ದೈವಿಕ ರಕ್ಷಕ. ಅವರನ್ನು ಪೂಜಿಸುವುದರಿಂದ ಧರ್ಮದ ಮಾರ್ಗ ಬೆಳಗುತ್ತದೆ. ಸಾತ್ವಿಕ ಮೌಲ್ಯಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಭಕ್ತರನ್ನು ಪ್ರೇರೇಪಿಸುತ್ತದೆ. ಏಕತೆ ಮತ್ತು ಸಾಮರಸ್ಯವನ್ನು ಬಲಪಡಿಸಲು ಪ್ರಾಚೀನ ಜ್ಞಾನ ಮತ್ತು ಸಂಪ್ರದಾಯಗಳನ್ನು ಹರಡುವುದು ಅತ್ಯಗತ್ಯ. ಈ ದೃಷ್ಟಿಕೋನದಲ್ಲಿ, ಜಾಗತಿಕ ಅಯ್ಯಪ್ಪ ಸಂಗಮವು ಹೆಚ್ಚಿನ ಮಹತ್ವದ್ದಾಗಿದೆ' ಎಂದು ಆದಿತ್ಯನಾಥ್ ಸರ್ಕಾರಕ್ಕೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಆಮಂತ್ರಣಕ್ಕಾಗಿ ಆದಿತ್ಯನಾಥ್ ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ. ವಿರೋಧ ಪಕ್ಷಗಳು ಮತ್ತು ರಾಜ್ಯ ಬಿಜೆಪಿ ಅಯ್ಯಪ್ಪ ಸಂಗಮವನ್ನು ಬಹಿಷ್ಕರಿಸಿರುವ ಮಧ್ಯೆ ಯೋಗಿ ಆದಿತ್ಯನಾಥ್ ಅವರ ಶುಭಾಶಯ ಪತ್ರ ರಾಜ್ಯ ಬಿಜೆಪಿಗೆ ಇರಿಸುಮುರಿಸಿಗೆ ಕಾರಣವಾಯಿತು. ಸಂಗಮಕ್ಕೆ ಸಹಕರಿಸದಿರುವ ನಿರ್ಧಾರದ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿತ್ತು.
ಎಸ್‍ಎನ್‍ಡಿಪಿ, ಕೆಪಿಎಂಎಸ್ ಮತ್ತು ಎನ್‍ಎಸ್‍ಎಸ್‍ನಂತಹ ಪ್ರಮುಖ ಹಿಂದೂ ಸಂಘಟನೆಗಳು ಸಂಗಮಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ ನಂತರ, ಒಂದು ವರ್ಗವು ದೇವಸ್ವಂ ಮಂಡಳಿಯು ಕಾರ್ಯಕ್ರಮದಿಂದ ದೂರ ಉಳಿಯಬಾರದು ಎಂದು ಅಭಿಪ್ರಾಯಪಟ್ಟಿದೆ. ಏತನ್ಮಧ್ಯೆ, ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಐಕ್ಯ ವೇದಿಕೆಯಂತಹ ಹಿಂದುತ್ವ ಸಂಘಟನೆಗಳು ಸಂಗಮದೊಂದಿಗೆ ಸಹಕರಿಸದಿರಲು ನಿರ್ಧರಿಸಿತ್ತು.




