ಪ್ಯಾರಿಸ್: ಫೆಲೆಸ್ತೀನಿಯನ್ ರಾಷ್ಟ್ರವನ್ನು ಗುರುತಿಸುವ ಯೋಜನೆಯು ರಾಯಭಾರ ಕಚೇರಿ ತೆರೆಯುವುದನ್ನು ಒಳಗೊಂಡಿರುವುದಿಲ್ಲ. ಗಾಝಾದಲ್ಲಿ ಹಮಾಸ್ ಬಂಧನದಲ್ಲಿ ಇರಿಸಿರುವ ಒತ್ತೆಯಾಳುಗಳ ಬಿಡುಗಡೆಯಾಗುವ ತನಕ ಫೆಲೆಸ್ತೀನ್ ನಲ್ಲಿ ರಾಯಭಾರ ಕಚೇರಿಯನ್ನು ತೆರೆಯುವುದಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಹೇಳಿದ್ದಾರೆ.
ಫೆಲೆಸ್ತೀನ್ ನಲ್ಲಿ ನಮ್ಮ ರಾಯಭಾರಿ ಕಚೇರಿ ಆರಂಭಿಸಬೇಕಿದ್ದರೆ ಗಾಝಾದಲ್ಲಿರುವ ಒತ್ತೆಯಾಳುಗಳು ಬಿಡುಗಡೆಯಾಗಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದು ಸಿಬಿಎಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ರೋನ್ ಹೇಳಿದ್ದಾರೆ.
ಗಾಝಾವನ್ನು ಮರು ನಿರ್ಮಿಸುವಾಗ ಅಲ್ಲಿಂದ ಫೆಲೆಸ್ತೀನೀಯರನ್ನು ಸ್ಥಳಾಂತರಿಸುವುದನ್ನು ಫ್ರಾನ್ಸ್ ಬಲವಾಗಿ ವಿರೋಧಿಸುತ್ತದೆ. ಫೆಲೆಸ್ತೀನೀಯರನ್ನು ಹೊರ ತಳ್ಳುವುದು ಗಾಝಾ ಮರು ನಿರ್ಮಾಣ ಯೋಜನೆಯ ಪೂರ್ವ ಷರತ್ತು ಆಗಿದ್ದರೆ ಅದನ್ನು ಅತಿರೇಕದ ಕ್ರಮ ಎನ್ನಬಹುದು. ಇಂತಹ ಯೋಜನೆಗಳು ಯಾರಿಗೂ ನೆಮ್ಮದಿ ತರುವುದಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.




