ಅಯೋಧ್ಯೆ: ವಿವಿಧ ಸರಕಾರಿ ಇಲಾಖೆಗಳು ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ)ಗಳನ್ನು ನೀಡದ ಕಾರಣ ಅಯೋಧ್ಯೆಯಲ್ಲಿ ಪ್ರಸ್ತಾವಿತ ಮಸೀದಿಗಾಗಿ ವಿನ್ಯಾಸ ಯೋಜನೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು(ಎಡಿಎ) ತಿರಸ್ಕರಿಸಿರುವುದನ್ನು ಆರ್‌ಟಿಐ ಉತ್ತರವು ಬಹಿರಂಗಗೊಳಿಸಿದೆ.
ಸರ್ವೋಚ್ಚ ನ್ಯಾಯಾಲಯವು ತನ್ನ ನ.9, 2019ರ ಅಯೋಧ್ಯೆ ತೀರ್ಪಿನಲ್ಲಿ ಮಸೀದಿ ನಿರ್ಮಾಣ ಮತ್ತು ಇತರ ಸೌಲಭ್ಯಗಳಿಗಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ಐದು ಎಕರೆ ಜಮೀನು ಮಂಜೂರು ಮಾಡುವಂತೆ ಆದೇಶಿಸಿತ್ತು.
ಆ.3, 2020ರಂದು ಅಯೋಧ್ಯೆ ಜಿಲ್ಲಾಧಿಕಾರಿ ಅನುಜ ಕುಮಾರ್ ಅವರು ಅಯೋಧ್ಯೆ ಸಮೀಪದ ಧನ್ನಿಪುರ ಗ್ರಾಮದಲ್ಲಿನ ಐದು ಎಕರೆ ಭೂಮಿಯನ್ನು ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ವರ್ಗಾಯಿಸಿದ್ದರು. ಮಸೀದಿ ಟ್ರಸ್ಟ್ ಯೋಜನೆಯ ಅನುಮೋದನೆಗಾಗಿ ಜೂ.23, 2021ರಂದು ಅರ್ಜಿಯನ್ನು ಸಲ್ಲಿಸಿತ್ತು. ಅದರ ಬಳಿಕ ಅನುಮೋದನೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಸ್ಥಳೀಯ ಪತ್ರಕರ್ತ ಓಂ ಪ್ರಕಾಶ ಸಿಂಗ್ ಅವರು ಸೆ.16,2025ರಂದು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ಎಡಿಎ, ಅರ್ಜಿ ಮತ್ತು ಪರಿಶೀಲನೆ ಶುಲ್ಕವಾಗಿ ನಾಲ್ಕು ಲ.ರೂ.ಗಳನ್ನು ಮಸೀದಿ ಟ್ರಸ್ಟ್ ಪಾವತಿಸಿರುವುದನ್ನು ಒಪ್ಪಿಕೊಂಡಿದೆ. ಅದು ಒದಗಿಸಿರುವ ಮಾಹಿತಿಯ ಪ್ರಕಾರ ಪಿಡಬ್ಲ್ಯುಡಿ, ಮಾಲಿನ್ಯ ನಿಯಂತ್ರಣ, ನಾಗರಿಕ ವಾಯುಯಾನ, ನೀರಾವರಿ ಮತ್ತು ಕಂದಾಯ ಇಲಾಖೆಗಳು ಹಾಗೂ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಅಗ್ನಿಶಾಮಕ ಸೇವೆಯಿಂದ ಎನ್‌ಒಸಿಗಳನ್ನು ಕೋರಲಾಗಿತ್ತು.
'ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಉತ್ತರ ಪ್ರದೇಶ ಸರಕಾರವು ನಮಗೆ ನಿವೇಶನವನ್ನು ಮಂಜೂರು ಮಾಡಿದೆ. ಆದರೆ ಸರಕಾರಿ ಇಲಾಖೆಗಳು ತಮ್ಮ ಎನ್‌ಒಸಿಗಳನ್ನು ಏಕೆ ನೀಡಿಲ್ಲ ಮತ್ತು ಎಡಿಎ ಮಸೀದಿಯ ವಿನ್ಯಾಸ ಯೋಜನೆಯನ್ನು ತಿರಸ್ಕರಿಸಿದ್ದು ಏಕೆ ಎನ್ನುವುದು ನನಗೆ ಅರ್ಥವಾಗಿಲ್ಲ' ಎಂದು ಮಸೀದಿ ಟ್ರಸ್ಟ್‌ನ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದರು.
ಆದಾಗ್ಯೂ, ಅಗ್ನಿಶಾಮಕ ಇಲಾಖೆಯು ಸ್ಥಳ ಪರಿಶೀಲನೆ ನಡೆಸಿದ ಸಮಯದಲ್ಲಿ ಮಸೀದಿ ಮತ್ತು ಆಸ್ಪತ್ರೆ ಕಟ್ಟಡದ ಎತ್ತರಕ್ಕೆ ಅನುಗುಣವಾಗಿ ಸಂಪರ್ಕ ರಸ್ತೆ 12 ಮೀ.ಅಗಲವಾಗಿರುವುದು ಅಗತ್ಯ ಎನ್ನುವುದನ್ನು ಕಂಡುಕೊಂಡಿತ್ತು. ಸ್ಥಳದಲ್ಲಿ ಎರಡು ಸಂಪರ್ಕ ರಸ್ತೆಗಳು ಆರು ಮೀಟರ್‌ಗಿಂತ ಹೆಚ್ಚು ಅಗಲವಿರಲಿಲ್ಲ ಮತ್ತು ಮುಖ್ಯ ಸಂಪರ್ಕ ರಸ್ತೆಯ ಅಗಲವು ಕೇವಲ ನಾಲ್ಕು ಮೀಟರ್ ಆಗಿತ್ತು ಎಂದು ಹೇಳಿದ ಹುಸೇನ್, 'ಎನ್‌ಒಸಿ ಅಥವಾ ಅರ್ಜಿ ತಿರಸ್ಕಾರಗೊಂಡಿರುವ ಬಗ್ಗೆ ಯಾವುದೇ ಮಾಹಿತಿಯನ್ನು ನಾವು ಸ್ವೀಕರಿಸಿಲ್ಲ. ಅಗ್ನಿಶಾಮಕ ಇಲಾಖೆಯಿಂದ ಹೊರತುಪಡಿಸಿ ಇತರ ಯಾವುದೇ ಇಲಾಖೆಗಳಿಂದ ಯಾವುದೇ ಆಕ್ಷೇಪದ ಬಗ್ಗೆ ನಮಗೆ ತಿಳಿದಿಲ್ಲ. ಆರ್‌ಟಿಐ ಉತ್ತರವು ಈಗ ಪರಿಸ್ಥಿತಿಯನ್ನು ನಮಗೆ ಸ್ಪಷ್ಟವಾಗಿಸಿದೆ, ಮುಂದಿನ ಕ್ರಮದ ಬಗ್ಗೆ ನಾವು ನಿರ್ಧರಿಸುತ್ತೇವೆ' ಎಂದು ತಿಳಿಸಿದರು.




