HEALTH TIPS

ಎಸ್‌ಎಸ್‌ಎಲ್‌ವಿ ತಂತ್ರಜ್ಞಾನ: ಇಸ್ರೊ- ಎಚ್‌ಎಎಲ್‌ ಒಪ್ಪಂದ

ನವದೆಹಲಿ: 'ಸಣ್ಣ ಉಪಗ್ರಹ ಉಡ್ಡಯನ ವಾಹನ'ಗಳ (ಎಸ್‌ಎಸ್‌ಎಲ್‌ವಿ) ಉತ್ಪಾದನಾ ತಂತ್ರಜ್ಞಾನ ವರ್ಗಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬುಧವಾರ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಜತೆ ಒಡಂಬಡಿಕೆ ಮಾಡಿಕೊಂಡಿದೆ.

ಇದು ಬಾಹ್ಯಾಕಾಶ ವಲಯದಲ್ಲಿ ಉದ್ಯಮ ಸಹಭಾಗಿತ್ವದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಲಾಗಿದೆ.

ತಂತ್ರಜ್ಞಾನ ವರ್ಗಾವಣೆ ಕುರಿತ 100ನೇ ಒಪ್ಪಂದಕ್ಕೆ 'ಇಸ್ರೊ', 'ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌' (ಎನ್‌ಎಸ್‌ಐಎಲ್‌), 'ಇನ್‌ಸ್ಪೇಸ್‌' ಹಾಗೂ 'ಎಚ್‌ಎಎಲ್‌' ಸಹಿ ಮಾಡಿವೆ.

ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿದ ದಿನದಿಂದ 24 ತಿಂಗಳುಗಳ ಒಳಗೆ ತಂತ್ರಜ್ಞಾನ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು 'ಇನ್‌ಸ್ಪೇಸ್‌' ಕೇಂದ್ರ ತಿಳಿಸಿದೆ.

ಈ ಅವಧಿಯಲ್ಲಿ ಎಸ್‌ಎಸ್‌ಎಲ್‌ವಿಗಳಿಗೆ ಸಂಬಂಧಿಸಿದ ತಾಂತ್ರಿಕ ಜ್ಞಾನ ಮತ್ತು ತರಬೇತಿಯನ್ನು 'ಇಸ್ರೊ' ಸಂಸ್ಥೆಯು ಎಚ್‌ಎಎಲ್‌ಗೆ ವರ್ಗಾಯಿಸಲಿದೆ ಎಂದು ಅದು ಹೇಳಿದೆ.

'ವಾಣಿಜ್ಯ ಉದ್ದೇಶಕ್ಕೆ ಬಾಹ್ಯಾಕಾಶ ವಲಯವನ್ನು ಭಾರತವು ಉದಾರೀಕರಿಸಿರುವುದರಿಂದ ಅವಕಾಶಗಳು ವೃದ್ಧಿಸುತ್ತಿವೆ. ಇದಕ್ಕೆ ಪೂರಕವಾಗಿ ಕ್ರಿಯಾತ್ಮಕ ತಂತ್ರಜ್ಞಾನ ವರ್ಗಾವಣೆ ಕಾರ್ಯವಿಧಾನವನ್ನು ಇಸ್ರೊ ಹೊಂದಿದೆ' ಎಂದು 'ಇಸ್ರೊ' ಅಧ್ಯಕ್ಷ ವಿ.ನಾರಾಯಣನ್‌ ಪ್ರತಿಕ್ರಿಯಿಸಿದ್ದಾರೆ.

ಎಸ್‌ಎಸ್‌ಎಲ್‌ವಿ ತಂತಜ್ಞಾನ ವರ್ಗಾವಣೆಗೆ ಇಸ್ರೊ, ಎಚ್‌ಎಎಲ್‌, ಎನ್‌ಎಸ್‌ಐಎಲ್‌ ಮತ್ತು ಇನ್‌ಸ್ಪೇಸ್‌ ಒಂದಾಗಿರುವುದು ಈ ಕ್ಷೇತ್ರದಲ್ಲಿ ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ. ಇದು ಬಾಹ್ಯಾಕಾಶ ಉದ್ಯಮವನ್ನು ಸಬಲೀಕರಿಸಲು, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಉಡಾವಣಾ ಸೇವೆಗಳಿಗಾಗಿ ಭಾರತವನ್ನು ಜಾಗತಿಕ ಕೇಂದ್ರವಾಗಿ ಸ್ಥಾಪಿಸಬಯಸಿರುವ ಭಾರತ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು 'ಇನ್‌ಸ್ಪೇಸ್‌'ನ ಅಧ್ಯಕ್ಷ ಪವನ್‌ ಕುಮಾರ್‌ ಗೋಯೆಂಕಾ ಹೇಳಿದ್ದಾರೆ.

'ಎಸ್‌ಎಸ್‌ಎಲ್‌ವಿಗಳ ನಿರ್ಮಾಣಕ್ಕೆ ಅಗತ್ಯವಿರುವ ಕಾರ್ಯಪಡೆಗೆ ತರಬೇತಿ ನೀಡಲು ಹಾಗೂ ಸ್ವಾವಲಂಬಿ ಪರಿಸರ ವ್ಯವಸ್ಥೆ ನಿರ್ಮಿಸಲು ಎಚ್‌ಎಎಲ್‌ ತನ್ನ ಎಂಜಿನಿಯರಿಂಗ್‌ ಮತ್ತು ಉತ್ಪಾದನಾ ಶಕ್ತಿಯನ್ನು ಬಳಸುತ್ತದೆ' ಎಂದು ಎಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ.ಸುನಿಲ್‌ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries