HEALTH TIPS

ಯುಪಿಎಸ್‌ಸಿ: ಅಭ್ಯರ್ಥಿಗಳ ಪರಿಶೀಲನೆಗೆ ಎಐ ತಂತ್ರಜ್ಞಾನ

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಅಭ್ಯರ್ಥಿಗಳ ತ್ವರಿತ ಮತ್ತು ಸುರಕ್ಷಿತ ಪರಿಶೀಲನೆಗೆ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಆಧಾರಿತ ಮುಖಚಹರೆ ಗುರುತು ದೃಢೀಕರಣ ಪದ್ಧತಿ ಜಾರಿಗೊಳಿಸಲಿದೆ.

'ಎಐ ಬಳಕೆಯ ಪ್ರಾಯೋಗಿಕ ಪದ್ಧತಿಯನ್ನು ಯಶಸ್ವಿಯಾಗಿ ಈಗಾಗಲೇ ಕೈಗೊಳ್ಳಲಾಗಿದೆ' ಎಂದು ಯುಪಿಎಸ್‌ಸಿ ಮುಖ್ಯಸ್ಥ ಅಜಯ್‌ಕುಮಾರ್ ಶುಕ್ರವಾರ ತಿಳಿಸಿದರು.

ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹೆಚ್ಚಿಸಲು ಮತ್ತು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಪ್ರವೇಶದ ವೇಳೆ ಎದುರಿಸುವ ಅಡೆತಡೆಗಳನ್ನು ನಿವಾರಿಸಲು ರಾಷ್ಟ್ರೀಯ ಇ- ಆಡಳಿತ ವಿಭಾಗದ (ಎನ್‌ಇಜಿಡಿ) ಸಹಯೋಗದಲ್ಲಿ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ಐಎಎಸ್‌, ಐಎಫ್‌ಎಸ್‌ ಮತ್ತು ಐಪಿಎಸ್‌ ಸೇರಿದಂತೆ ಹಲವು ಸರ್ಕಾರಿ ಹುದ್ದೆಗಳಿಗೆ ಆಯೋಗವು ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ.

ವೈ-ಫೈ ಸೌಲಭ್ಯ ಮತ್ತು ಮುಖಚಹರೆ ಖಾತ್ರಿ ಪಡಿಸಿಕೊಳ್ಳುವ ಕಾರ್ಯಕ್ಕೆ ಬಳಸುವ ಸಿಬ್ಬಂದಿಗೆ ತರಬೇತಿ ನೀಡುವುದು ಮಹತ್ವದ್ದಾಗಿದೆ. ಇದಕ್ಕಾಗಿ ಅಗತ್ಯ ಗುಣಮಟ್ಟ ಆಧಾರಿತ ಕಾರ್ಯಾಚರಣೆ ಪ್ರಕ್ರಿಯೆಗಳನ್ನು (ಎಸ್‌ಓಪಿ) ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ನಡೆಸಿದ್ದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ), ನೌಕಾ ಅಕಾಡೆಮಿ (ಎನ್‌ಎ) ಮತ್ತು ಸಿಡಿಎಸ್‌ (ಸಂಯುಕ್ತ ರಕ್ಷಣಾ ಸೇವೆಗಳು) ಪರೀಕ್ಷೆಗಳಲ್ಲಿ ಎಐ ಆಧಾರಿತ ಮುಖಚಹರೆ ದೃಢೀಕರಣ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅರ್ಜಿಗಳಲ್ಲಿ ಅಭ್ಯರ್ಥಿಗಳು ಲಗತ್ತಿಸಿರುವ ಭಾವಚಿತ್ರಗಳೊಂದಿಗೆ ಡಿಜಿಟಲ್‌ ಮಾದರಿಯಲ್ಲಿ ಹೋಲಿಕೆ ಮಾಡಲಾಗಿತ್ತು. ಗುರುಗ್ರಾಮದ ಪರೀಕ್ಷಾ ಕೇಂದ್ರಗಳಲ್ಲಿ ಮುಖಚಹರೆಗಳ ಗುರುತಿಸುವಿಕೆ ನಡೆದಿತ್ತು ಎಂದು ಅವರು ತಿಳಿಸಿದರು.

ಹೊಸ ಪದ್ಧತಿಯು ಪ್ರತಿ ಅಭ್ಯರ್ಥಿಯ ಪರಿಶೀಲನಾ ಸಮಯವನ್ನು 8ರಿಂದ 10 ಸೆಕೆಂಡ್‌ಗಳಷ್ಟು ಉಳಿಸಿದೆ. ಅಲ್ಲದೇ ಪರೀಕ್ಷಾ ಕೇಂದ್ರದ ಪ್ರವೇಶ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ ಎಂದು ಅವರು ಹೇಳಿದರು.

ಪರೀಕ್ಷಾ ಕೇಂದ್ರಗಳಿಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸುವುದನ್ನೂ ಈ ಪದ್ಧತಿ ತಪ್ಪಿಸಲಿದೆ. ಚುರುಕಾದ, ಸುರಕ್ಷಿತ ಮತ್ತು ದಕ್ಷತೆಯಿಂದ ಪರೀಕ್ಷೆ ನಡೆಸುವತ್ತ ಎಐ ಆಧಾರಿತ ಮುಖ ಚಹರೆ ಗುರುತಿಸುವಿಕೆ ಮಹತ್ವದ ಹೆಜ್ಜೆಯಾಗಿದೆ.

ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದ ಸ್ಥಳಗಳಲ್ಲಿ 1129 ಅಭ್ಯರ್ಥಿಗಳಿಗೆ 2,700 ಸ್ಕ್ಯಾನ್‌ಗಳನ್ನು ನಡೆಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮತ್ತಷ್ಟು ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಆಯೋಗ ಬದ್ಧವಾಗಿದೆ ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries