ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದರ್ಭದಲ್ಲಿ ಯಾವುದೇ ಯುದ್ಧದಲ್ಲಿ ಭೂಪಡೆಗಳ ಪ್ರಾಮುಖ್ಯವನ್ನು ಪ್ರತಿಪಾದಿಸಿದ ಅವರು, ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಮಾತುಕತೆಗಳನ್ನು ಉಲ್ಲೇಖಿಸಿದರು.
ಅಲಾಸ್ಕಾ ಶೃಂಗಸಭೆಯಲ್ಲಿ ಉಭಯ ನಾಯಕರು ಎಷ್ಟು ಭೂಮಿ ಕೈಗಳನ್ನು ಬದಲಿಸಬೇಕು ಎಂಬ ಬಗ್ಗೆ ಮಾತ್ರ ಚರ್ಚಿಸಿದ್ದರು ಎಂದು ಹೇಳಿದ ದ್ವಿವೇದಿ, 'ಭಾರತದಲ್ಲಿ ನಾವು ಎರಡು ದಿಕ್ಕುಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಭೂಮಿಯ ಮೇಲಿನ ನಿಯಂತ್ರಣವು ವಿಜಯವನ್ನು ನಿರ್ಧರಿಸುತ್ತದೆ'ಎಂದರು.
'ಆಪರೇಷನ್ ಸಿಂಧೂರ' ವಾಯುಶಕ್ತಿಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಗೊಳಿಸಿದೆ ಎಂದು ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಅವರು ಹೇಳಿದ ಎರಡು ವಾರಗಳ ಬಳಿಕ ಜನರಲ್ ದ್ವಿವೇದಿಯವರ ಹೇಳಿಕೆ ಹೊರಬಿದ್ದಿದೆ.
ದ್ವಿವೇದಿ ತನ್ನ ಭಾಷಣದಲ್ಲಿ ಯುದ್ಧದ ಬದಲಾಗುತ್ತಿರುವ ಸ್ವರೂಪ ಹಾಗೂ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತೀಯ ಸೇನೆಯು ಹೇಗೆ ಪರಿವರ್ತನಾತ್ಮಕ ಬದಲಾವಣೆಗಳನ್ನು ಮಾಡುತ್ತಿದೆ ಎನ್ನುವುದನ್ನೂ ವಿವರಿಸಿದರು.




