ನವದೆಹಲಿ: ಜಿಎಸ್‌ಟಿ ದರಗಳ ಪರಿಷ್ಕರಣೆಯ ಪ್ರಯೋಜನಗಳನ್ನು ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿಗಾವಹಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಶುಕ್ರವಾರ ಹೇಳಿದರು.
ವಿವಿಧ ವಸ್ತುಗಳ ಮೇಲಿನ ತೆರಿಗೆ ಇಳಿಕೆಯು ಅವುಗಳ ಬೆಲೆಗಳಲ್ಲಿ ಪ್ರತಿಫಲಿಸಲಿವೆ ಎಂಬ ಭರವಸೆಯನ್ನು ಉದ್ಯಮ ಕ್ಷೇತ್ರ ನೀಡಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯ ಬಳಕೆಯ ಹತ್ತು ಹಲವು ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯು ಇತ್ತೀಚೆಗೆ ತೆಗೆದುಕೊಂಡಿದ್ದು, ಈ ತೀರ್ಮಾನಗಳು ನವರಾತ್ರಿಯ ಮೊದಲ ದಿನವಾದ ಇದೇ 22ರಿಂದಲೇ ಜಾರಿಗೆ ಬರಲಿವೆ.
ಭಾರತದ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದ್ದರಿಂದ ಮೋದಿ ಸರ್ಕಾರವು ಜಿಎಸ್‌ಟಿ ಸುಧಾರಣೆ ಕೈಗೊಂಡಿರಬಹುದು ಎಂಬ ವಾದವನ್ನು ಗೋಯಲ್ ಇದೇ ವೇಳೆ ತಿರಸ್ಕರಿಸಿದರು.
'ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಸಚಿವರು, ಕಾರ್ಯದರ್ಶಿಗಳ ನಡುವೆ ವರ್ಷಪೂರ್ತಿ ನಡೆದ ಸಮಾಲೋಚನೆಯ ಪರಿಣಾಮದಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಇತರ ದೇಶದ ನಿರ್ಧಾರಕ್ಕೂ ನಮ್ಮ ಜಿಎಸ್‌ಟಿ ವ್ಯವಸ್ಥೆಯಲ್ಲಿನ ಸುಧಾರಣೆಗೂ ಸಂಬಂಧವಿಲ್ಲ' ಎಂದು ಅವರು ಹೇಳಿದರು.
'ತೆರಿಗೆ ಇಳಿಕೆಯ ಪೂರ್ಣ ಪ್ರಯೋಜನ ಗ್ರಾಹಕರಿಗೆ ದೊರೆಯುವಂತಾಗಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ನಿಗಾವಹಿಸಲಿದೆ. ಅಂತೆಯೇ ರಾಜ್ಯ ಸರ್ಕಾರಗಳೂ ಈ ನಿಟ್ಟಿನಲ್ಲಿ ಮೇಲ್ವಿಚಾರಣೆ ವಹಿಸಬೇಕು' ಎಂದು ಅವರು ಸಲಹೆ ನೀಡಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಸೆ. 3ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕರ್ನಾಟಕ, ತೆಲಂಗಾಣ ರಾಜ್ಯ ಸರ್ಕಾರಗಳು ಈ ಸುಧಾರಣೆಗಳ ಅನುಮೋದನೆಯನ್ನು ತಡೆಯಲು ಯತ್ನಿಸಿದವು. ಆದರೆ ಅಂತಿಮವಾಗಿ ಒಮ್ಮತದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಗೋಯಲ್ ವಿವರಿಸಿದರು.
ಸ್ವಾತಂತ್ರ್ಯದ ಬಳಿಕ ಪರೋಕ್ಷ ತೆರಿಗೆಯಲ್ಲಿ ಇಂತಹ ಮಹತ್ವದ ಸುಧಾರಣೆ ತಂದಿರುವುದು ಬಹುಶಃ ಇದೇ ಮೊದಲು ಎಂದು ಅವರು ಹೇಳಿದರು.
- ಪೀಯೂಷ್ ಗೋಯಲ್, ಕೇಂದ್ರ ಸಚಿವಇಷ್ಟು ದೊಡ್ಡ ಬದಲಾವಣೆಯು ರಾತ್ರೋರಾತ್ರಿ ಸಂಭವಿಸಲು ಸಾಧ್ಯವಿಲ್ಲ. ಅಮೆರಿಕವು ಸುಂಕ ಹೆಚ್ಚಿಸುವ ನಿರ್ಧಾರವನ್ನು ಕಳೆದ ತಿಂಗಳಷ್ಟೇ ತೆಗೆದುಕೊಂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.




