ಇಂದೋರ್: ಲಘು ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರಿಗೆ ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಲತಾ ಮಂಗೇಶ್ಕರ್ ಅವರ 96ನೇ ಜನ್ಮ ದಿನದ ಪ್ರಯುಕ್ತ ಭಾನುವಾರ ಇಂದೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್, ನಿಗಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಗಾನ ಸುಧೆ, ಭಾರತ ರತ್ನ ಲತಾ ಮಂಗೇಶ್ಕರ್ ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ವಿಶಿಷ್ಟವಾಗಿದೆ. ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಕಲಾವಿದರ ನೀಡುವ ಅತ್ಯುತ್ತಮ ಗೌರವ ಇದಾಗಿದೆ ಎಂದು ಯಾದವ್ ಹೇಳಿದರು.
ಮೂರು ದಶಕಗಳ ಹಿಂದೆ ಲತಾ ಮಂಗೇಶ್ಕರ್ ಅಲಂಕಾರ್ ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದೆ. ಇದೇ ವೇದಿಕೆಯಲ್ಲಿ ಇಂದು ಪ್ರಶಸ್ತಿಯನ್ನು ಸ್ವೀಕರಿಸಲು ತಮಗೆ ತುಂಬಾ ಹರ್ಷವಾಗುತ್ತಿದೆ. ಲತಾ ಮಂಗೇಶ್ಕರ್ ಕೇವಲ ಸ್ಫೂರ್ತಿ ಮಾತ್ರವಲ್ಲ, ಸಂಗೀತದ ಜೀವಂತ ಸಂಪ್ರದಾಯವೂ ಹೌದು. ಈ ಗೌರವವನ್ನು ಸ್ವೀಕರಿಸಲು ನಾನು ಧನ್ಯ. ಈ ಕ್ಷಣ ನನ್ನ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ ಸೋನು ನಿಗಮ್ ಭಾವುಕರಾದರು.
ಮಂಗೇಶ್ಕರ್ ಅವರು 1929ರ ಸೆ.28ರಂದು ಇಂದೋರ್‌ನಲ್ಲಿ ಜನಿಸಿದರು. 2022 ಫೆ.6 ರಂದು ಮುಂಬೈನಲ್ಲಿ ನಿಧನರಾದರು.
ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿ
1984ರಲ್ಲಿ ಮಧ್ಯಪ್ರದೇಶ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಲಘು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ರಾಜ್ಯದ ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ಈ ಪ್ರಶಸ್ತಿ ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ನೌಶಾದ್, ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.




