ಕಠ್ಮಂಡು: ಭ್ರಷ್ಟಾಚಾರ ಹಾಗೂ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧದ ವಿರುದ್ಧ ದೇಶವ್ಯಾಪಿ (ನೇಪಾಳ) ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾರತೀಯ ಪ್ರಜೆ ಸೇರಿದಂತೆ ಕನಿಷ್ಠ 51 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತರಲ್ಲಿ ಒಬ್ಬ ಭಾರತೀಯ ಪ್ರಜೆ, ಮೂವರು ಪೊಲೀಸರು ಮತ್ತು ಇತರ ನೇಪಾಳಿ ನಾಗರಿಕರು ಸೇರಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಥಾಪಾ ಅವರ ಹೇಳಿಕೆಯನ್ನು ಉಲ್ಲೇಖಿಸಿ 'ಕಠ್ಮಂಡು ಪೋಸ್ಟ್' ಪತ್ರಿಕೆ ವರದಿ ಮಾಡಿದೆ.
ಮಹಾರಾಜಗುಂಜ್‌ನ ತ್ರಿಭುನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯಲ್ಲಿ ಕನಿಷ್ಠ 36 ಶವಗಳಿವೆ. ಶುಕ್ರವಾರ ಮರಣೋತ್ತರ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಗುರುವಾರ ಮತ್ತು ಶುಕ್ರವಾರ ದೇಶದ ವಿವಿಧ ಭಾಗಗಳಿಂದ 17 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಜೆನ್-ಝಿ' ಯುವ ಸಮುದಾಯದ ಪ್ರತಿಭಟನೆಯಿಂದಾಗಿ ಈವರೆಗೆ ಸುಮಾರು 1,700 ಜನ ಗಾಯಗೊಂಡಿದ್ದಾರೆ. ಅವರಲ್ಲಿ 1,000 ಮಂದಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದೂ ಅವರು ಹೇಳಿದ್ದಾರೆ.

