HEALTH TIPS

RSSಗೆ 100 ವರ್ಷ: ಅಭೂತಪೂರ್ವ, ಸ್ಪೂರ್ತಿದಾಯಕ ಪ್ರಯಾಣ ಎಂದು ಮೋದಿ ಶ್ಲಾಘನೆ

ನವದೆಹಲಿ: ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯಾಗಿ 100 ವರ್ಷ ಪೂರೈಸಲಿದೆ. ಸಂಘದ ಅಭೂತಪೂರ್ವ ಮತ್ತು ಸ್ಪೂರ್ತಿದಾಯಕ ಪ್ರಯಾಣ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇಂದು (ಭಾನುವಾರ) ಪ್ರಸಾರಗೊಂಡ ಮಾಸಾಂತ್ಯದ 'ಮನದ ಮಾತು' ಕಾರ್ಯಕ್ರಮದ 126ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, 'ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಲಿದ್ದು, ಈ ಬಾರಿಯ ವಿಜಯದಶಮಿ ಬಹಳ ವಿಶೇಷವಾಗಿದೆ' ಎಂದು ಹೇಳಿದ್ದಾರೆ.

'100 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಸ್ಥಾಪನೆಯಾದ ಸಂದರ್ಭದಲ್ಲಿ ದೇಶವು ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಸಲ್ಪಟ್ಟಿತ್ತು. ಈ ಗುಲಾಮಗಿರಿಯು ನಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ತೀವ್ರವಾಗಿ ನೋಯಿಸಿತ್ತು. ವಿಶ್ವದ ಅತ್ಯಂತ ಹಳೆಯದಾದ ನಮ್ಮ ನಾಗರಿಕತೆಯು ಅಸ್ಮಿತೆ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ನಮ್ಮ ನಾಗರಿಕರು ಕೀಳರಿಮೆಯ ಸಂಕೀರ್ಣಕ್ಕೆ ಬಲಿಯಾಗುತ್ತಿದ್ದರು' ಎಂದು ಅವರು ತಿಳಿಸಿದ್ದಾರೆ.

'ಡಾ. ಕೇಶವ್ ಬಲಿರಾಮ್‌ ಹೆಡಗೇವಾರ್‌ ಅವರು 1925ರ ವಿಜಯದಶಮಿಯ ಶುಭ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಪಿಸಿದ್ದರು. ಹೆಡಗೇವಾರ್‌ ನಿಧನದ ನಂತರ ಗುರೂಜಿ (ಮೋಹನ್‌ ಭಾಗವತ್) ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಈ ಮಹಾನ್ ಧ್ಯೇಯವನ್ನು ಮುಂದುವರೆಸಿದರು' ಎಂದು ಮೋದಿ ಉಲ್ಲೇಖಿಸಿದ್ದಾರೆ.

'ತ್ಯಾಗ, ಸೇವೆಯ ಮನೋಭಾವ ಮತ್ತು ಶಿಸ್ತಿನ ಬೋಧನೆಗಳು ಆರ್‌ಎಸ್‌ಎಸ್‌ನ ನಿಜವಾದ ಶಕ್ತಿಯಾಗಿದೆ. ಸಂಘ ನೂರು ವರ್ಷಗಳಿಂದ ಅವಿಶ್ರಾಂತವಾಗಿ ಮತ್ತು ನಿರಂತರವಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅದಕ್ಕಾಗಿಯೇ ದೇಶದಲ್ಲಿ ಎಲ್ಲಿಯಾದರೂ ನೈಸರ್ಗಿಕ ವಿಕೋಪ ಸಂಭವಿಸಿದಾಗ, ಎಲ್ಲರಿಗಿಂತ ಮೊದಲು ಆರ್‌ಎಸ್‌ಎಸ್ ಸ್ವಯಂಸೇವಕರು ಅಲ್ಲಿಗೆ ಹೋಗಿರುತ್ತಾರೆ. ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡುತ್ತಿರುತ್ತಾರೆ' ಎಂದು ಮೋದಿ ಅವರು ಆರ್‌ಎಸ್‌ಎಸ್‌ನ ಬೋಧನೆಗಳನ್ನು ಸ್ಮರಿಸಿದ್ದಾರೆ.

'ಲಕ್ಷಾಂತರ ಸ್ವಯಂಸೇವಕರ ಜೀವನದ ಪ್ರತಿಯೊಂದು ಪ್ರಯತ್ನದಲ್ಲಿ 'ದೇಶ ಮೊದಲು' ಎಂಬ ಮನೋಭಾವವು ಯಾವಾಗಲೂ ಸರ್ವೋಚ್ಚವಾಗಿರುತ್ತದೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮಹಾ ಯಜ್ಞಕ್ಕೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಿರುವ ಪ್ರತಿಯೊಬ್ಬ ಸ್ವಯಂಸೇವಕರಿಗೂ ನಾನು ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ' ಎಂದು ಮೋದಿ ತಿಳಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries