ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಹೆಸರು ಸೇರ್ಪಡೆ ಮಾಡಲು 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಎಸ್‌ಐಆರ್ ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು 11 ದಾಖಲೆಗಳನ್ನು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿತ್ತು.
ಇದರಲ್ಲಿ ಆಧಾರ್ ಕಾರ್ಡ್ ಅನ್ನು ಹೊರಗಿಟ್ಟಿತ್ತು. ಇದೀಗ 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. 12 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಗಳನ್ನು ಮತದಾದರರು ಸಲ್ಲಿಸಬಹುದು.
ಆಧಾರ್ ಪೌರತ್ವದ ಪುರಾವೆಯಲ್ಲ ಎನ್ನುವದನ್ನೂ ಇದೇ ವೇಳೆ ಕೋರ್ಟ್ ಸ್ಪಷ್ಟಪಡಿಸಿತು. ಆಧಾರ್ ಅನ್ನು ದಾಖಲೆಯಾಗಿ ಪರಿಗಣಿಸುವ ಬಗ್ಗೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಬೇಕು ಎಂದು ಕೋರ್ಟ್ ಆಯೋಗಕ್ಕೆ ನಿರ್ದೇಶಿಸಿದೆ.
ಮತದಾರರು ಸಲ್ಲಿಕೆ ಮಾಡುವ ಆಧಾರ್ ಕಾರ್ಡ್‌ನ ಮಾನ್ಯತೆ, ಅಧೀಕೃತತೆಯನ್ನು ಪರಿಶೀಲಿಸುವ ಜವಾಬ್ದಾರಿ ಚುನಾವಣಾ ಆಯೋಗದ ಅಧಿಕಾರಿಗಳದ್ದು ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ. ಆಧಾರ್ ಕಾಯ್ದೆಯ ಪ್ರಕಾರ, ಆಧಾರ್ ಕಾರ್ಡ್ ಪೌರತ್ವದ ದಾಖಲೆಯಲ್ಲ, ಆದರೆ ಜನಪ್ರತಿನಿಧಗಳ ಕಾಯ್ದೆಯ ಸೆಕ್ಷನ್ 23(4)ರ ಪ್ರಕಾರ ಯಾವುದಾದರೊಬ್ಬ ವ್ಯಕ್ತಿಯ ಗುರುತು ಸಾಬೀತಿಗೆ ಆಧಾರ್ ಕಾರ್ಡ್ ದಾಖಲೆಯಾಗಿ ಪರಿಗಣಿಸವಬಹುದು ಎನ್ನುವುದನ್ನೂ ಕೋರ್ಟ್ ಗಮನಿಸಿತು.
ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಪರಿಗಣಿಸಬೇಕು ಎಂದು ಕೋರಿ ಆರ್‌ಜೆಡಿ ಹಾಗೂ ಇತರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ಇದೀಗ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಪರಿಗಣಿಸುವಂತೆ ನಿರ್ದೇಶಿಸಿದೆ.




