HEALTH TIPS

ಕರ್ನೂಲ್‌ ಬಸ್‌ ದುರಂತ ಪ್ರಕರಣ; ಅಪಘಾತಕ್ಕೂ ಮುನ್ನ 10ಕ್ಕೂ ಅಧಿಕ ವಾಹನ ಸಂಚಾರ

ಹೈದರಬಾದ್‌: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಪೀಪರ್‌ ಎ.ಸಿ ಬಸ್‌ ಬೆಂಕಿ ಹತ್ತಿಕೊಂಡು 19 ಮಂದಿ ಪ್ರಯಾಣಿಕರಿಗೆ ಸಾವಿಗೆ ಕಾರಣವಾಗಿದ್ದ ಪ್ರಕರಣದ ತನಿಖೆಯ ವೇಳೆ ಮತ್ತಷ್ಟು ಹೊಸ ಅಂಶಗಳು ಬೆಳಕಿಗೆ ಬಂದಿವೆ. 

'ಬೈಕ್‌ಗೆ ಬಸ್ ಡಿಕ್ಕಿ ಹೊಡೆಯುವ ಮುನ್ನ ಹತ್ತಕ್ಕೂ ಅಧಿಕ ವಾಹನಗಳು ಇದೇ ಮಾರ್ಗದಲ್ಲಿ ಸಾಗಿದ್ದವು.

ತುಸು ದೂರದಲ್ಲಿಯೇ ಬೈಕ್‌ ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ್ದ ವಾಹನದ ಚಾಲಕರು ವೇಗ ತಗ್ಗಿಸಿ, ಪಕ್ಕಕ್ಕೆ ಸಾಗಿ ಸುರಕ್ಷಿತವಾಗಿ ಪ್ರಯಾಣ ಮುಂದುವರಿಸಿದ್ದರು. ಆದರೆ, ಕಾವೇರಿ ಬಸ್‌ ಮಾತ್ರ ಬೈಕ್‌ ಅನ್ನು 200 ಮೀಟರ್‌ ತನಕ ಎಳೆದೊಯ್ದಿದೆ. ಈ ವೇಳೆ ಬೈಕ್‌ ಟ್ಯಾಂಕ್‌ನಿಂದ ಪೆಟ್ರೋಲ್‌ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು, ದುರಂತ ಸಂಭವಿಸಿತು' ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

'ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿ, ದುರಂತ ನಡೆದ ದಿನ ಮಾರ್ಗದಲ್ಲಿ ಸಾಗಿದ ವಾಹನಗಳ ಚಾಲಕರನ್ನು ವಿಚಾರಣೆ ನಡೆಸಿದ ವೇಳೆ ಈ ಮಾಹಿತಿ ತಿಳಿದುಬಂದಿದೆ. ಮಳೆಯಿಂದ ಬೈಕ್‌ ಸ್ಕಿಡ್‌ ಆಗಿ ಇಬ್ಬರು ಯುವಕರು ಬಿದ್ದಿರುವುದನ್ನು ಗಮನಿಸಿದ್ದೆವು, ಸಣ್ಣ ಅಪಘಾತವೆಂದು ಮುಂದೆ ಸಾಗಿದ್ದೆವು. ಮಳೆ ಕಾರಣದಿಂದ ವಾಹನ ನಿಲ್ಲಿಸದೇ ಮುಂದೆ ಸಾಗಿದ್ದೆವು ಎಂದು ಮತ್ತೊಬ್ಬ ಚಾಲಕರು ತಿಳಿಸಿದ್ದಾರೆ' ಎಂದು ಪೊಲೀಸರು ವಿವರಿಸಿದ್ದಾರೆ.

'ತಾಸಿಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಬಸ್‌ ಕನಿಷ್ಠ 120 ಮೀಟರ್‌ಗೂ ಮುಂಚಿತವಾಗಿ ಬ್ರೇಕ್‌ ಹಾಕಿದ್ದರೆ ಅಪಘಾತವನ್ನು ತಪ್ಪಿಸಬಹುದಿತ್ತು. ಸಾಮಾನ್ಯವಾಗಿ ವೇಗದಲ್ಲಿದ್ದ ಬಸ್‌ ಬ್ರೇಕ್‌ ಹಾಕಿದ್ದರೂ ಕೂಡ 80 ಮೀಟರ್‌ ಅಂತರ ಕ್ರಮಿಸುವಷ್ಟರಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಮತ್ತೆ 40 ಮೀಟರ್‌ ಕ್ರಮಿಸಿದ್ದರೂ 120 ಮೀಟರ್‌ ನಂತರ ಪೂರ್ಣವಾಗಿ ನಿಲ್ಲಿಸಬಹುದಿತ್ತು. ಈ ಪ್ರಕರಣದಲ್ಲಿ ಚಾಲಕನ ಅಜಾಗರೂಕತೆಯಿಂದಲೇ ಬೈಕ್‌ಗೆ ಡಿಕ್ಕಿ ಹೊಡೆದು 200 ಮೀಟರ್ ಎಳೆದೊಯ್ದಿದೆ' ಎಂದು ನಿವೃತ್ತ ಉಪ ಸಾರಿಗೆ ಆಯುಕ್ತ ಡಾ.ಶ್ರೀನಿವಾಸ್‌ ಪುಪ್ಪಲ ತಿಳಿಸಿದ್ದಾರೆ.

ಎರಡು ಕ್ವಾರ್ಟರ್ ಮದ್ಯಸೇವನೆ: ಅಪಘಾತದಲ್ಲಿ ಮೃತಪಟ್ಟಿದ್ದ ಬೈಕ್‌ ಸವಾರ ಶಿವಶಂಕರ್ ಹಾಗೂ ಆತನ ಸ್ನೇಹಿತ ಎರಡು ಕ್ವಾರ್ಟರ್ ಮದ್ಯ ಸೇವಿಸಿದ್ದರು. ರಾಂಪಲ್ಲಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮುನ್ನ ಮತ್ತೆ ಮದ್ಯ ಖರೀದಿಸಿದ್ದರು, ಬೈಕ್‌ನಲ್ಲಿ ಹೆಡ್‌ಲೈಟ್‌ ಕಾರ್ಯನಿರ್ವಹಿಸುತ್ತಿರಲಿಲ್ಲ, ಇಂಡಿಕೇಟರ್‌ ಬೆಳಕಿನಲ್ಲಿಯೇ ಬೈಕ್ ಚಲಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಸ್‌ ಮಾಲೀಕ ನಾಪತ್ತೆ

ದುರಂತ ನಡೆದು ವಾರದ ಬಳಿಕವೂ ವಿ.ಕಾವೇರಿ ಟ್ರಾವೆಲ್ಸ್‌ನ ಮಾಲೀಕ ವೆಮುರಿ ವಿನೋದ್‌ ಕುಮಾರ್ ಇದುವರೆಗೂ ಪತ್ತೆಯಾಗಿಲ್ಲ. ಅವರ ಪತ್ತೆಗಾಗಿ ಕರ್ನೂಲ್‌ ಪೊಲೀಸರು ನಾಲ್ಕು ತಂಡ ರಚಿಸಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries