ನವದೆಹಲಿ: ದೀಪಾವಳಿ ಹಬ್ಬದ ಆಚರಣೆ ವೇಳೆ ಪಟಾಕಿ ಸಿಡಿಸುವುದಕ್ಕಾಗಿ ಮತ್ತು ಮಾರಾಟ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 150ಕ್ಕೂ ಅಧಿಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಪಟಾಕಿ ಸಿಡಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ಆದೇಶಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 100ಕ್ಕೂ ಅಧಿಕ ಪ್ರಕರಣಗಳು ಹಾಗೂ ಅಕ್ರಮ ಪಟಾಕಿ ಮಾರಾಟದ ಆರೋಪದ ಮೇಲೆ 50ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದೀಪಾವಳಿ ವೇಳೆ ನವದೆಹಲಿಯಲ್ಲಿ ಪಟಾಕಿ ಸಿಡಿಸಲು ಅ.19 ಮತ್ತು ಅ.20 ರಂದು ಬೆಳಿಗ್ಗೆ 6 ರಿಂದ 7 ಗಂಟೆ ಹಾಗೂ ರಾತ್ರಿ 8 ರಿಂದ 10 ಗಂಟೆಯವರೆಗೆ ಸಮಯವನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ. ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಿದೆ.
ಪಟಾಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ವಸತಿ ಪ್ರದೇಶಗಳಲ್ಲಿ ದೊಡ್ಡಮಟ್ಟದ ನಿಯಮ ಉಲ್ಲಂಘನೆ ತಡೆಯುವ ಉದ್ದೇಶದಿಂದ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕಳಪೆ ಹಂತಕ್ಕೆ ಕುಸಿದಿದ್ದು, ರೆಡ್ ಝೋನ್‌ಗೆ ತಲುಪಿದೆ.

