ವಾಷಿಂಗ್ಟನ್: ಗ್ರಾಮೀಣ ಟೆನ್ನೀಸೀಯಲ್ಲಿರುವ ಅಮೆರಿಕ ಸೇನೆಯ ಸ್ಫೋಟಕ ಸಂಸ್ಕರಣಾ ಘಟಕದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಸ್ಫೋಟ ಘಟನೆಯಲ್ಲಿ 19 ಮಂದಿ ನಾಪತ್ತೆಯಾಗಿದ್ದು, ಎಲ್ಲರೂ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಕಂಪನಿಯ 1300 ಎಕರೆ ವಿಸ್ತಾರದ ಕ್ಯಾಂಪಸ್ ನಲ್ಲಿ ಸಂಭವಿಸಿದ ಸ್ಫೋಟ ಇಡೀ ಕಟ್ಟಡವನ್ನು ನಾಮಾವಶೇಷ ಮಾಡಿದ್ದು, ಹಲವು ಮೈಲಿಗಳ ದೂರದವರೆಗೆ ಕಂಪನದ ಅನುಭವವಾಗಿದೆ.
ಅವಶೇಷಗಳು ಹೊತ್ತಿ ಉರಿಯುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಪೂರಕ ಸ್ಫೋಟಗಳ ಭೀತಿಯಿಂದ ಪರಿಹಾರ ಮತ್ತು ರಕ್ಷಣಾ ತಂಡಗಳು ಹಲವು ಗಂಟೆಗಳ ಕಾಲ ಘಟನಾ ಸ್ಥಳದಿಂದ ದೂರ ಉಳಿಯಬೇಕಾಯಿತು. ಸ್ಥಳೀಯ ಸುದ್ದಿಜಾಲ ಡಬ್ಲ್ಯುಟಿವಿಎಫ್-ಟಿವಿ ಸೆರೆ ಹಿಡಿದ ವೈಮಾನಿಕ ದೃಶ್ಯಾವಳಿಯಲ್ಲಿ ದಟ್ಟವಾದ ಕಪ್ಪುಹೊಗೆ ಎಲ್ಲೆಡೆ ವ್ಯಾಪಿಸಿರುವುದು ಕಾಣಿಸುತ್ತಿದೆ.
"ವಿವರಿಸಲು ಏನೂ ಉಳಿದಿಲ್ಲ; ಎಲ್ಲವೂ ಭಸ್ಮವಾಗಿವೆ" ಎಂದು ಹಂಫ್ರೈಸ್ ಕೌಂಟಿ ಶೆರೀಫ್ ಕ್ರಿಸ್ ಡೇವಿಸ್ ಹೇಳಿದ್ದಾರೆ. ಹಲವು ಮಂದಿ ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದರೂ, ನಿಖರವಾದ ಸಂಖ್ಯೆಯನ್ನು ಪ್ರಕಟಿಸಿಲ್ಲ ಹಾಗೂ ಎಲ್ಲರೂ ನಾಪತ್ತೆಯಾಗಿದ್ದಾರೆ ಎಂದು ವಿವರಿಸಿದೆ. ಸಂತ್ರಸ್ತರ ಕುಟುಂಬಗಳು ಘಟಕದ ಬಳಿ ಮುಂದಿನ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಸ್ಫೋಟದ ತೀವ್ರತೆಯಿಂದ ಅಕ್ಕಪಕ್ಕದ ಮನೆಗಳು ಕೂಡಾ ಕಂಪಿಸಿದ್ದು, ತುರ್ತುಸ್ಪಂದನೆ ಪಡೆ ತಕ್ಷಣ ಸ್ಪಂದಿಸಿ ಸ್ಥಳೀಯರ ನೆರವಿಗೆ ಧಾವಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ನ್ಯಾಷ್ವಿಲ್ಲೆಯಿಂದ 97 ಕಿಲೋಮೀಟರ್ ದೂರದ ಬಕ್ಸ್ನಾರ್ಟ್ ಎಂಬ ಪ್ರದೇಶದಲ್ಲಿ ಅಕ್ಯೂರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಘಟಕ ಕಾರ್ಯನಿರ್ವಹಿಸುತ್ತಿತ್ತು.




