HEALTH TIPS

ಆಧಾರ್‌ನಿಂದ ಬ್ಯಾಂಕ್ ನಿಯಮಗಳವರೆಗೆ : ನ.1ರಿಂದ ಏಳು ಪ್ರಮುಖ ಹಣಕಾಸು ಬದಲಾವಣೆಗಳೇನು?

ನವದೆಹಲಿ: ಇಂದಿನಿಂದ (ನವಂಬರ್ 1ರಿಂದ) ನಿಮ್ಮ ದೈನಂದಿನ ಹಣಕಾಸಿನ ಮೇಲೆ ನೇರವಾಗಿ ಪರಿಣಾಮವನ್ನು ಬೀರುವ ಹಲವಾರು ಹೊಸ ನಿಯಮಗಳು ಜಾರಿಗೊಳ್ಳಲಿವೆ.

ಆಧಾರ್ ನವೀಕರಣ ಶುಲ್ಕಗಳು ಮತ್ತು ಬ್ಯಾಂಕ್ ನಾಮ ನಿರ್ದೇಶನಗಳಲ್ಲಿ ಬದಲಾವಣೆಗಳಿಂದ ಹಿಡಿದು ಹೊಸ ಜಿಎಸ್‌ಟಿ ಸ್ಲ್ಯಾಬ್‌ ಗಳು ಮತ್ತು ಕಾರ್ಡ್ ಶುಲ್ಕಗಳವರೆಗೆ ಏನೇನು ಬದಲಾಗುತ್ತಿವೆ ಮತ್ತು ಅದು ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದರ ಸರಳ ನೋಟವಿಲ್ಲಿದೆ;

►ಆಧಾರ್ ನವೀಕರಣ ಶುಲ್ಕಗಳ ಪರಿಷ್ಕರಣೆ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು(ಯುಐಡಿಎಐ) ಮಕ್ಕಳ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್‌ಗಳ ನವೀಕರಣಗಳಿಗೆ 125 ರೂ.ಶುಲ್ಕವನ್ನು ಮನ್ನಾ ಮಾಡಿದ್ದು, ಇದು ಒಂದು ವರ್ಷದವರೆಗೆ ಚಾಲ್ತಿಯಲ್ಲಿರಲಿದೆ.

ವಯಸ್ಕರಿಗೆ ಹೆಸರು, ಜನ್ಮದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸಲು 75 ರೂ. ಮತ್ತು ಬೆರಳಚ್ಚುಗಳು ಅಥವಾ ಐರಿಸ್(ಕಣ್ಣಿನ ಪಾಪೆ) ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ನವೀಕರಣಗಳಿಗೆ 125 ರೂ.ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ನೀವು ಈಗ ಯಾವುದೇ ಪೂರಕ ದಾಖಲೆಗಳಿಲ್ಲದೆ ನಿಮ್ಮ ಆಧಾರ್ ವಿಳಾಸ, ಜನ್ಮದಿನಾಂಕ ಅಥವಾ ಹೆಸರನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು.

►ಹೊಸ ಬ್ಯಾಂಕ್ ನಾಮನಿರ್ದೇಶನ ನಿಯಮಗಳು

ಬ್ಯಾಂಕುಗಳು ನ.1ರಿಂದ ಗ್ರಾಹಕರು ಒಂದು ಖಾತೆ,ಲಾಕರ್ ಅಥವಾ ಸುರಕ್ಷಿತ ಕಸ್ಟಡಿಯಲ್ಲಿರುವ ವಸ್ತುವಿಗೆ ನಾಲ್ವರನ್ನು ನಾಮಿನಿಗಳನ್ನಾಗಿ ಹೆಸರಿಸಲು ಅವಕಾಶ ನೀಡಲಿವೆ.

ಈ ಹೊಸ ನಿಯಮವು ಕುಟುಂಬಗಳಿಗೆ ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಹಣ ಲಭಿಸುವಂತೆ ಮಾಡುವ ಮತ್ತು ಮಾಲಿಕತ್ವ ವಿವಾದಗಳನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದೆ. ಗ್ರಾಹಕರು ನಾಮಿನಿಗಳನ್ನು ಸೇರಿಸುವ ಅಥವಾ ಬದಲಿಸುವ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ.

►ಹೊಸ ಜಿಎಸ್‌ಟಿ ಸ್ಲ್ಯಾಬ್‌ಗಳು

ನ.1ರಿಂದ ಸರಕಾರವು ಕೆಲವು ವಸ್ತುಗಳಿಗೆ ವಿಶೇಷ ತೆರಿಗೆ ದರದೊಂದಿಗೆ ಹೊಸದಾಗಿ ಎರಡು ಸ್ಲ್ಯಾಬ್‌ಗಳ ಜಿಎಸ್‌ಟಿ ವ್ಯವಸ್ಥೆಯನ್ನು ಪರಿಚಯಿಸಲಿದೆ.

ಹಿಂದಿನ ಶೇ.5.ಶೇ.12.ಶೇ.18 ಮತ್ತು ಶೇ.28ರ ನಾಲ್ಕು ಸ್ಲ್ಯಾಬ್‌ಗಳ ಜಿಎಸ್‌ಟಿ ವ್ಯವಸ್ಥೆ ಬದಲಾಗಲಿದೆ. ಶೇ.12 ಮತ್ತು ಶೇ.28ರ ಸ್ಲ್ಯಾಬ್‌ಗಳನ್ನು ತೆಗೆದುಹಾಕಲಾಗುತ್ತದೆ,ಆದರೆ ಐಷಾರಾಮಿ ಮತ್ತು ಪಾಪದ ಸರಕುಗಳಿಗೆ(ಸಿನ್ ಗುಡ್ಸ್) ಶೇ.40 ತೆರಿಗೆಯು ಅನ್ವಯಿಸುತ್ತದೆ. ಈ ಕ್ರಮವು ಭಾರತದ ಪರೋಕ್ಷ ತೆರಿಗೆ ರಚನೆಯನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ.

►ಎನ್‌ಪಿಎಸ್‌ನಿಂದ ಯುಪಿಎಸ್‌ಗೆ ಪರಿವರ್ತನೆ ಗಡುವು ವಿಸ್ತರಣೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ(ಎನ್‌ಪಿಎಸ್) ಏಕೀಕೃತ ಪಿಂಚಣಿ ವ್ಯವಸ್ಥೆಗೆ(ಯುಪಿಎಸ್) ಬದಲಿಸಲು ಬಯಸುವ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈಗ ನ.30ರವರೆಗೆ ಸಮಯಾವಕಾಶವಿದೆ.

► ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು

ಎಲ್ಲ ನಿವೃತ್ತ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ನವೆಂಬರ್ ಅಂತ್ಯದೊಳಗೆ ತಮ್ಮ ವಾರ್ಷಿಕ ಜೀವಿತ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅವರು ತಮ್ಮ ಬ್ಯಾಂಕ್ ಶಾಖೆಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಜೀವನ್ ಪ್ರಮಾಣ ಪೋರ್ಟಲ್ ಮೂಲಕ ಇದನ್ನು ಮಾಡಬಹುದು.

ಗಡುವನ್ನು ತಪ್ಪಿಸಿಕೊಂಡರೆ ಪಿಂಚಣಿ ಪಾವತಿಗಳು ವಿಳಂಬವಾಗಬಹುದು ಅಥವಾ ಸ್ಥಗಿತಗೊಳ್ಳಬಹುದು.

►ಪಿಎನ್‌ಬಿಯಲ್ಲಿ ಲಾಕರ್ ಶುಲ್ಕಗಳು ಬದಲಾಗಲಿವೆ

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ದೇಶಾದ್ಯಂತ ತನ್ನ ಲಾಕರ್ ಬಾಡಿಗೆ ಶುಲ್ಕಗಳನ್ನು ಶೀಘ್ರವೇ ಪರಿಷ್ಕರಿಸಲಿದೆ. ನೂತನ ಶುಲ್ಕಗಳು ಲಾಕರ್ ಗಾತ್ರ ಮತ್ತು ವರ್ಗವನ್ನು ಅವಲಂಬಿಸಿರಲಿವೆ.

ವರದಿಗಳ ಪ್ರಕಾರ ಬ್ಯಾಂಕು ಪರಿಷ್ಕತ ಶುಲ್ಕಗಳನ್ನು ನವಂಬರ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ ಮತ್ತು ಅಧಿಸೂಚನೆಯ 30 ದಿನಗಳ ನಂತರ ಜಾರಿಗೊಳ್ಳಲಿವೆ.

►ಎಸ್‌ಬಿಐ ಕಾರ್ಡ್‌ದಾರರಿಗೆ ಹೊಸ ಶುಲ್ಕಗಳು

ನ.1ರಿಂದ ಎಸ್‌ಬಿಐ ಕಾರ್ಡ್ ಬಳಕೆದಾರರು ಥರ್ಡ್ ಪಾರ್ಟಿ ಆಯಪ್‌ಗಳ ಮೂಲಕ ಮಾಡುವ ಶಿಕ್ಷಣ ಸಂಬಂಧಿತ ಪಾವತಿಗಳಿಗೆ ಶೇ.1ರಷ್ಟು ಶುಲ್ಕವನ್ನು ಭರಿಸಬೇಕಾಗುತ್ತದೆ.

ಹೆಚ್ಚುವರಿಯಾಗಿ ಎಸ್‌ಬಿಐ ಕಾರ್ಡ್ ಬಳಸಿ ಡಿಜಿಟಲ್ ವ್ಯಾಲೆಟ್‌ಗೆ 1,000 ರೂ.ಗಿಂತ ಅಧಿಕ ಮೊತ್ತವನ್ನು ಜಮೆ ಮಾಡಿದರೂ ಶೇ.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries