ನವದೆಹಲಿ: 2020ರಲ್ಲಿ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ದಂಗೆಗಳು ಏಕಾಏಕಿ ಉಂಟಾದ ಜನಾಕ್ರೋಶವಲ್ಲ, ಬದಲಾಗಿ ದೇಶದ ಆಡಳಿತ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಉದ್ದೇಶದ ಪೂರ್ವಯೋಜಿತ ಷಡ್ಯಂತ್ರವಾಗಿತ್ತು ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸ್ಫೋಟಕ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಈ ದಂಗೆಗಳಲ್ಲಿ 53 ಮಂದಿ ಸಾವನ್ನಪ್ಪಿ, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್, ಶಾರ್ಜಿಲ್ ಇಮಾಂ ಮತ್ತು ಇತರ ಆರೋಪಿಗಳ ಜಾಮೀನು ಅರ್ಜಿಯನ್ನು ವಿರೋಧಿಸುವ ಸಲುವಾಗಿ ಪೊಲೀಸರು ಸಲ್ಲಿಸಿದ ಅಫಿಡವಿಟ್‌ನಲ್ಲಿ, ಈ ದಂಗೆಗಳು ದೇಶದ ಸಾರ್ವಭೌಮತ್ವ ಮತ್ತು ಅಖಂಡತೆ ವಿರುದ್ಧದ ವ್ಯವಸ್ಥಿತ ದಾಳಿ ಆಗಿದ್ದವು ಎಂದು ತಿಳಿಸಿದ್ದಾರೆ.
ಅಫಿಡವಿಟ್ ಪ್ರಕಾರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ವೇಳೆಯೇ ಆರೋಪಿಗಳು ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರು. ಇದರ ಉದ್ದೇಶ ವಿದೇಶಿ ಮಾಧ್ಯಮಗಳ ಗಮನ ಸೆಳೆದು, ಸಿಎಎ ಕಾಯ್ದೆಯನ್ನು ಮುಸ್ಲಿಮರ ಮೇಲಿನ ದಾಳಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವುದಾಗಿತ್ತು.
ದೆಹಲಿಯಲ್ಲಷ್ಟೇ ಅಲ್ಲದೆ ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕದಲ್ಲೂ ಇದೇ ಮಾದರಿಯ ಗಲಭೆ ಸೃಷ್ಟಿಸಲು ಪ್ರಯತ್ನ ಮಾಡಲಾಗಿತ್ತು ಎಂದು ಪೊಲೀಸರ ವರದಿ ಹೇಳುತ್ತದೆ.
ಅಫಿಡವಿಟ್‌ನಲ್ಲಿ ಉಲ್ಲೇಖಿಸಿದಂತೆ, ಉಮರ್ ಖಾಲಿದ್ ದೆಹಲಿಯ ಚಕ್ಕಾ ಜಾಮ್ (ರಸ್ತೆ ತಡೆ) ಕಾರ್ಯಾಚರಣೆಯ ಮೂಲಪೂರಕವಾಗಿದ್ದು, ದೆಹಲಿ ಪ್ರತಿಭಟನೆ ಬೆಂಬಲ ಗುಂಪು (DPSG) ಈ ಷಡ್ಯಂತ್ರವನ್ನು ಜಾರಿಗೆ ತರುವ ಉದ್ದೇಶದಿಂದ ಸ್ಥಾಪಿಸಲಾಗಿತ್ತು. ಸೀಲಾಂಪುರದಲ್ಲಿ ನಡೆದ ರಹಸ್ಯ ಸಭೆಯಲ್ಲಿ, ಸ್ಥಳೀಯ ಮಹಿಳೆಯರಿಗೆ ಚೂರಿ, ಆಮ್ಲ, ಕಲ್ಲು ಮತ್ತು ಕಾರದಪುಡಿ ಸಂಗ್ರಹಿಸಿಡುವಂತೆ ನಿರ್ದೇಶಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಶಾರ್ಜಿಲ್ ಇಮಾಂ 2019ರ ಡಿಸೆಂಬರ್‌ನಲ್ಲಿ ನಡೆದ ಆರಂಭಿಕ ಹಂತದ ಪ್ರತಿಭಟನೆಗಳ ಹಿಂದಿನ ಪ್ರಮುಖ ಷಡ್ಯಂತ್ರಗಾರನಾಗಿದ್ದು, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಅಸನ್ಸೋಲ್ ಪ್ರದೇಶಗಳಲ್ಲಿ ಭಾಷಣಗಳ ಮೂಲಕ ದೆಹಲಿಯಲ್ಲಿ ರಸ್ತೆ ತಡೆಗೆ ಕರೆ ನೀಡಿದ್ದಾನೆ. ಅವನು ಕೆಲವು ಮೂಲಭೂತವಾದಿ ಗುಂಪುಗಳೊಂದಿಗೆ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳಿಗೆ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಅಫಿಡವಿಟ್ ಹೇಳುತ್ತದೆ.
ಈ ಪ್ರಕರಣದಲ್ಲಿ ಯುಎಪಿಎ (ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ) ಅಡಿ ಖಾಲಿದ್, ಇಮಾಂ, ಗುಲ್ಫಿಶಾ ಫಾತಿಮಾ, ಮೀರಂ ಹೈದರ್ ಹಾಗೂ ಇತರರನ್ನು ಬಂಧಿಸಲಾಗಿದೆ. ಇವರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಪೊಲೀಸರು ತಮ್ಮ ಅಫಿಡವಿಟ್‌ನಲ್ಲಿ, ಆರೋಪಿಗಳು "ಜೈಲಲ್ಲೇ ಇರಬೇಕೇ ಹೊರತು ಬೇಲ್ ಮೇಲೆ ಇರಬಾರದು" ಎಂದು ವಾದಿಸಿದ್ದಾರೆ. ತನಿಖೆಯಲ್ಲಿ 230ಕ್ಕೂ ಹೆಚ್ಚು ಸಾಕ್ಷ್ಯಾಧಾರಗಳು, ಡಿಜಿಟಲ್ ದಾಖಲೆಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.




