HEALTH TIPS

ಸಿರಪ್‌ ತಯಾರಿಕೆ ಕಾರ್ಖಾನೆಗೆ ಬೀಗ: ಮಕ್ಕಳ ಸಾವು 20ಕ್ಕೆ ಏರಿಕೆ

ಚೆನ್ನೈ: ಕೆಮ್ಮಿನ 'ಕಲುಷಿತ' ಸಿರಪ್‌ ಸೇವಿಸಿ ಮಧ್ಯಪ್ರದೇಶದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿರುವ ಮಧ್ಯೆಯೇ, ಈ ಸಿರಪ್‌ ತಯಾರಿಸುವ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ ಕಾರ್ಖಾನೆಗೆ ಬೀಗ ಹಾಕಿರುವ ತಮಿಳುನಾಡು ಸರ್ಕಾರ, ಕಂಪನಿಯ ಇಬ್ಬರಿಗೆ ಶೋಕಾಸ್‌ ನೋಟಿಸ್‌ ನೀಡಿದೆ.

ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ, ಕಾಂಚಿಪುರಂ ಜಿಲ್ಲೆಯ ಸುಂಗುವರಚತ್ರಂನಲ್ಲಿರುವ ಕಂಪನಿಯ ಕಾರ್ಖಾನೆಗೆ ಮಂಗಳವಾರ ಸಂಜೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಕಂಪನಿಯ ಮಾಲೀಕ ಡಾ.ಜಿ.ರಂಗನಾಥನ್‌ ಹಾಗೂ ಅನಲಿಟಿಕಲ್‌ ಕೆಮಿಸ್ಟ್‌ ಕೆ.ಮಹೇಶ್ವರಿ ಅವರಿಗೆ ನೋಟಿಸ್‌ ನೀಡಲಾಗಿದೆ. ಕಂಪನಿಯಿಂದ ಹಲವು ಉಲ್ಲಂಘನೆಗಳಾಗಿವೆ. ಕಂಪನಿ ಉತ್ಪಾದಿಸುವ ಸಿರಪ್‌ನಲ್ಲಿ ವಿಷಕಾರಿ ದ್ರಾವಣ ಡೈಎಥಿಲೀನ್ ಗ್ಲೈಕಾಲ್‌ (ಡಿಇಜಿ) ಪ್ರಮಾಣ ಶೇ 48.6ರಷ್ಟು ಇರುವುದು ಪರೀಕ್ಷೆಯಿಂದ ಕಂಡುಬಂದಿದೆ. ಹೀಗಾಗಿ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಸಿರಪ್‌ ತಯಾರಿಸಿದ್ದ ಪ್ರಮಾಣ, ಸಿರಪ್‌ ವಿತರಣೆಗೆ ಸಂಬಂಧಿಸಿದ ದಾಖಲೆಗಳು, ಪ್ರತಿ ಬ್ಯಾಚ್‌ ಔಷಧಿಯ ಪ್ಯಾಕೇಜಿಂಗ್‌ಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

'ಕಂಪನಿಯು ಮಾರುಕಟ್ಟೆಯಿಂದ ಈ ಕೆಮ್ಮಿನ ಸಿರಪ್‌ ವಾಪಸು ತರಿಸಿಕೊಳ್ಳಬೇಕು ಹಾಗೂ ಆ ರೀತಿ ಮರಳಿ ತರಿಸಿಕೊಳ್ಳಲಾದ ಸರಕಿನ ಕುರಿತ ವಿವರಗಳನ್ನು ಸಹ ಒದಗಿಸಬೇಕು' ಎಂದೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ರಂಗನಾಥನ್‌ಗಾಗಿ ಎಸ್‌ಐಟಿ ಶೋಧ

ಚೆನ್ನೈ: ಕೆಮ್ಮಿನ ಸಿರಪ್‌ ಕುಡಿದು ಮಕ್ಕಳು ಮೃತಪಟ್ಟಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ಮಧ್ಯಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಿರಪ್ ತಯಾರಿಸುವ ಕಾರ್ಖಾನೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಂಪನಿ ಮಾಲೀಕ ರಂಗನಾಥನ್‌ ಅವರ ಪತ್ತೆಗಾಗಿ ಎಸ್‌ಐಟಿ ಶೋಧ ನಡೆಸುತ್ತಿದೆ. ಕಂಪನಿ ತಯಾರಿಸುತ್ತಿರುವ 'ಕೋಲ್ಡ್ರಿಫ್‌' ಕೆಮ್ಮಿನ ಸಿರಪ್‌ ಅನ್ನು ಮಧ್ಯಪ್ರದೇಶ ಹಾಗೂ ತಮಿಳುನಾಡು ಸರ್ಕಾರಗಳು ನಿಷೇಧಿಸಿದ ಬೆನ್ನಲ್ಲೇ ಮೂರು ದಿನಗಳಿಂದ ರಂಗನಾಥನ್‌ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. 7 ಜನ ಸದಸ್ಯರು ಇರುವ ಎಸಿಪಿ ನೇತೃತ್ವದ ತಂಡವು ನಗರದಲ್ಲಿರುವ ಕಂಪನಿಯ ನೋಂದಾಯಿತ ಕಚೇರಿಗೂ ಭೇಟಿ ನೀಡಿ ಕೆಲ ಮಾಹಿತಿಗಳನ್ನು ಸಂಗ್ರಹಿಸಿತು ಎಂದು ಮೂಲಗಳು ಹೇಳಿವೆ. 'ಮಧ್ಯಪ್ರದೇಶದಿಂದ ಬಂದಿರುವ ಎಸ್‌ಐಟಿಗೆ ಸ್ಥಳೀಯ ಪೊಲೀಸರು ನೆರವು ನೀಡುತ್ತಿದ್ದಾರೆ. ಇಂದು ಸಿರಪ್‌ ಉತ್ಪಾದನಾ ಘಟಕದಲ್ಲಿ ಎಸ್‌ಐಟಿ ಪರಿಶೀಲನೆ ನಡೆಸಿತು' ಎಂದು ಇಲ್ಲಿನ ಅಶೋಕನಗರ ಪೊಲೀಸ್‌ ಠಾಣೆ ಅಧಿಕಾರಿಯೊಬ್ಬರು ತಿಳಿಸಿದರು.

ಎರಡು ಸಿರಪ್‌ ಬಳಕೆ ಬೇಡ'

ಹೈದರಾಬಾದ್: ನಿರ್ದಿಷ್ಟ ಬ್ಯಾಚ್‌ನ 'ರಿಲೈಫ್' ಹಾಗೂ ರೆಸ್ಪಿಫ್ರೆಶ್ ಟಿಆರ್‌' ಕೆಮ್ಮಿನ ಸಿರಪ್‌ಗಳ ಬಳಕೆಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ತೆಲಂಗಾಣ ಸರ್ಕಾರ ಸೂಚಿಸಿದೆ. 'ಈ ಎರಡು ಸಿರಪ್‌ಗಳಲ್ಲಿ ವಿಷಕಾರಿ ದ್ರಾವಣ ಡೈಎಥಿಲೀನ್‌ ಗ್ಲೈಕಾಲ್‌(ಡಿಇಜಿ) ಇರುವುದು ಪತ್ತೆಯಾಗಿದ್ದು ಈ ಕುರಿತು ಮಧ್ಯಪ್ರದೇಶದ ಔಷಧ ಪರೀಕ್ಷೆ ಪ್ರಯೋಗಾಲಯ ಎಚ್ಚರಿಕೆ ನೀಡಿದೆ. ಹೀಗಾಗಿ ಇವುಗಳ ಬಳಕೆಯನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಲಾಗಿದೆ' ಎಂದು ತೆಲಂಗಾಣ ಔಷಧ ನಿಯಂತ್ರಣ ಇಲಾಖೆಯ ಮಹಾ ನಿರ್ದೇಶಕ ಶಾನವಾಜ್‌ ಕಾಸಿಮ್‌ ತಿಳಿಸಿದ್ದಾರೆ. 'ರಿಲೈಫ್‌' ಸಿರಪ್‌ ಅನ್ನು ಶೇಫ್‌ ಫಾರ್ಮಾ ಪ್ರೈವೇಟ್‌ ಲಿಮಿಟೆಡ್‌ ಹಾಗೂ ರೆಸ್ಪಿಫ್ರೆಶ್ ಟಿಆರ್‌'ಅನ್ನು ರೆಡ್‌ನೆಕ್ಸ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್‌ ಲಿಮಿಟೆಡ್ ತಯಾರಿಸುತ್ತವೆ. ಈ ಎರಡೂ ಕಂಪನಿಗಳ ಉತ್ಪಾದನಾ ಘಟಕಗಳು ಗುಜರಾತ್‌ನಲ್ಲಿವೆ.

'ಕಂಪನಿ ವಿರುದ್ಧ ಕ್ರಿಮಿನಲ್ ಕ್ರಮ'

ತಿರುನೆಲ್ವೇಲಿ(ತಮಿಳುನಾಡು):'ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿನ ಕಾರಣದಿಂದಾಗಿ ನಿಷೇಧಕ್ಕೆ ಒಳಗಾಗಿರುವ ಕೆಮ್ಮಿನ ಸಿರಪ್‌ ತಯಾರಕ ಕಂಪನಿ ವಿರುದ್ಧ ರಾಜ್ಯ ಸರ್ಕಾರ ಕ್ರಿಮಿನಲ್‌ ಕ್ರಮ ತೆಗೆದುಕೊಳ್ಳಲಿದೆ' ಎಂದು ತಮಿಳುನಾಡು ಸಚಿವ ಎಂ.ಸುಬ್ರಮಣಿಯನ್‌ ಬುಧವಾರ ಇಲ್ಲಿ ಹೇಳಿದ್ದಾರೆ. 'ಕಂಪನಿಯನ್ನು ಮುಚ್ಚುವುದಕ್ಕೆ ಸಂಬಂಧಿಸಿ ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ' ಎಂದಿದ್ದಾರೆ.

'5 ಮಕ್ಕಳ ಸ್ಥಿತಿ ಗಂಭೀರ'

ಛಿಂದ್ವಾಢ (ಮಧ್ಯಪ್ರದೇಶ): 'ಕಲುಷಿತವಾಗಿದ್ದ ಕೆಮ್ಮಿನ ಸಿರಪ್‌ ಸೇವಿಸಿದ್ದರಿಂದಾಗಿ ರಾಜ್ಯದ ಐದು ಮಕ್ಕಳ ಆರೋಗ್ಯ ಹದಗೆಟ್ಟಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಈ ಸಿರಪ್‌ ಸೇವಿಸಿದ ಪರಿಣಾಮ ಮೂತ್ರಪಿಂಡ ಸೋಂಕು ಕಾಣಿಸಿಕೊಂಡಿದ್ದರಿಂದ 20 ಮಕ್ಕಳು ಮೃತಪಟ್ಟಿದ್ದಾರೆ' ಮಧ್ಯಪ್ರದೇಶ ಆರೋಗ್ಯ ಸಚಿವ ರಾಜೇಂದ್ರ ಶುಕ್ಲಾ ಬುಧವಾರ ಹೇಳಿದ್ದಾರೆ. ಮೃತಪಟ್ಟ ಮಕ್ಕಳ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಐದು ಜನ ಮಕ್ಕಳಿಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಮಕ್ಕಳ ಪ್ರಾಣ ಉಳಿಸಲು ವೈದ್ಯರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries