HEALTH TIPS

25 ತಾಸು ಕೈಗೆ ಕೋಳ ಹಾಕಿ ಕೂರಿಸಿದ್ದರು: ಅಮೆರಿಕದಿಂದ ಗಡೀಪಾರಾದ ಭಾರತೀಯರ ನೋವು

ಅಂಬಾಲಾ/ಕುರುಕ್ಷೇತ್ರ: 'ನನ್ನ ಕಾಲುಗಳು ಊದಿಕೊಂಡಿವೆ. ವಿಮಾನದಲ್ಲಿ 25 ತಾಸು ಕೈಗೆ ಕೋಳ ಹಾಕಿ ಕೂರಿಸಿದ್ದರು' ಎಂದು ಅಮೆರಿಕದಿಂದ ಗಡೀಪಾರಾಗಿರುವ 45 ವರ್ಷದ ಹರ್ಜಿಂದರ್‌ ಸಿಂಗ್‌ ಅಳಲು ತೋಡಿಕೊಂಡರು.

ಅಮೆರಿಕ ಗಡೀಪಾರು ಮಾಡಿರುವ ಅಕ್ರಮ ವಲಸಿಗರನ್ನು ಹೊತ್ತ ವಿಮಾನವು ಶನಿವಾರ ರಾತ್ರಿ ದೆಹಲಿಗೆ ಬಂದಿಳಿಯಿತು.

'ಅಕ್ರಮ ವಲಸಿಗರಲ್ಲಿ ಹರಿಯಾಣದ ಕೈಥಾಲ್‌, ಕರ್ನಲ್‌, ಕುರುಕ್ಷೇತ್ರ, ಅಂಬಾಲಾ, ಯಮುನಾ ನಗರ, ಜಿಂದ್‌ ಮತ್ತು ಪಾಣಿಪತ್‌ ಜಿಲ್ಲೆಯ 50 ಮಂದಿ ಸೇರಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದರು.

'ಗಡೀಪಾರು ಮಾಡಿರುವುದು ತುಂಬಾ ನೋವು ತಂದಿದೆ. ಉತ್ತಮ ಜೀವನಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಲು ₹35 ಲಕ್ಷ ಖರ್ಚು ಮಾಡಿದ್ದೆ. ಅದೆಲ್ಲವೂ ಈಗ ವ್ಯರ್ಥವಾಗಿದೆ' ಎಂದು ಹರ್ಜಿಂದರ್‌ ಸಿಂಗ್‌ ಹೇಳಿದರು.

'ಅಡುಗೆ ಕಲಿತು ಫ್ಲಾರಿಡಾದಲ್ಲಿ ನೆಲಸಿದ್ದೆ. ಅಲ್ಲಿನ ಉದ್ಯೋಗ ಚೆನ್ನಾಗಿಯೇ ಇತ್ತು. ಆದರೆ, ಟ್ರಂಪ್‌ ಆಡಳಿತವು ಸೆರೆಹಿಡಿದು ಭಾರತಕ್ಕೆ ವಾಪಸ್‌ ಕಳುಹಿಸಿತು' ಎಂದು ಸುದ್ದಿಗಾರರಿಗೆ ತಿಳಿಸಿದರು.

ಹರೀಶ್‌ ಎಂಬುವವರು, 'ಕಳೆದ ವರ್ಷ ಆಗಸ್ಟ್‌ನಲ್ಲಿ ಕೆನಡಾದಿಂದ ಅಮೆರಿಕಕ್ಕೆ ತೆರಳಿ, ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದೆ. ಅಮೆರಿಕದ ಅಧಿಕಾರಿಗಳು ಫೆಬ್ರುವರಿಯಲ್ಲಿ ಬಂಧಿಸಿದರು' ಎಂದು ತಿಳಿಸಿದರು.

ನರೇಶ್‌ ಕುಮಾರ್‌ ಎಂಬುವವರು, '₹42 ಲಕ್ಷ ನೀಡಿದರೆ ಅಮೆರಿಕಕ್ಕೆ ಕಳುಹಿಸುವುದಾಗಿ ಏಜೆಂಟ್ ಒಬ್ಬರು ಭರವಸೆ ನೀಡಿದ್ದರು. ಅಂತಿಮವಾಗಿ ₹57 ಲಕ್ಷ ತೆಗೆದುಕೊಂಡರು. ಇದಕ್ಕಾಗಿ ಒಂದು ಎಕರೆ ಜಮೀನನ್ನು ₹42 ಲಕ್ಷಕ್ಕೆ ಮಾರಾಟ ಮಾಡಿದೆ. ಅದೂ ಸಾಲದೆ ₹6 ಲಕ್ಷ ಸಾಲ ಮಾಡಿದೆ. ಸಹೋದರ ತನ್ನ ಬಳಿ ಇದ್ದ ಜಮೀನು ಮಾರಾಟ ಮಾಡಿ ₹6.5 ಲಕ್ಷ ನೀಡಿದ. ಸಂಬಂಧಿಗಳು ₹2.85 ಲಕ್ಷ ನೀಡಿದರು' ಎಂದು ತಮ್ಮ ಸಂಕಟವನ್ನು ವಿವರಿಸಿದರು.

ಭಾರತಕ್ಕೆ ವಾಪಸಾಗುವ ಮೊದಲು 14 ತಿಂಗಳು ಅಮೆರಿಕದಲ್ಲಿ ಸೆರೆವಾಸ ಅನುಭವಿಸಿದೆ ಎಂದು ಹೇಳಿದರು.

ಭಾರತಕ್ಕೆ ವಾಪಸಾಗಿರುವವರ ಪೈಕಿ ಬಹುತೇಕರು 25-40 ವರ್ಷ ವಯಸ್ಸಿನವರಾಗಿದ್ದು, ಅಮೆರಿಕಕ್ಕೆ ವಲಸೆ ಹೋಗುವ ಸಲುವಾಗಿ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ, ಸಂಬಂಧಿಗಳಿಂದ ಸಾಲ ಮಾಡಿದ್ದಾರೆ, ಅಲ್ಪಸ್ವಲ್ಪ ಉಳಿತಾಯದ ಹಣವನ್ನೂ ಆ ಕನಸಿಗಾಗಿ ಖರ್ಚು ಮಾಡಿದ್ದಾರೆ.

ಇವರಲ್ಲಿ ಬಹುತೇಕರು 'ಡಂಕಿ' ಮಾರ್ಗದ ಮೂಲಕ ಅಮೆರಿಕವನ್ನು ಪ್ರವೇಶಿಸಿದ್ದರು. 'ಡಂಕಿ ಮಾರ್ಗ' ಎಂಬುದು ಅಕ್ರಮ ವಲಸೆಯ ವಿಧಾನವಾಗಿದೆ. ಸಾಮಾನ್ಯವಾಗಿ ಅಮೆರಿಕ ಅಥವಾ ಬ್ರಿಟನ್‌ ದೇಶದಲ್ಲಿ ಅಕ್ರಮವಾಗಿ ನೆಲಸಲು ಬಯಸುವವರು ಈ ಮಾರ್ಗ ಅನುಸರಿಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries