HEALTH TIPS

ಪತ್ರಕರ್ತ ಸುಧೀರ್ ಚೌಧರಿಯ ವ್ಯಕ್ತಿತ್ವದ ಹಕ್ಕನ್ನು ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್: ಇನ್ನು 48 ಗಂಟೆಗಳೊಳಗಾಗಿ AI ಮತ್ತು ಡೀಪ್ ಫೇಕ್ ವಿಡಿಯೊಗಳನ್ನು ತೆಗೆದು ಹಾಕುವಂತೆ ಸೂಚನೆ

ನವದೆಹಲಿ: ಪತ್ರಕರ್ತ ಹಾಗೂ ದೂರದರ್ಶನ ನ್ಯೂಸ್ ನ ಪ್ರಧಾನ ಸಂಪಾದಕ ಸುಧೀರ್ ಚೌಧರಿಯ ವ್ಯಕ್ತಿತ್ವದ ಹಕ್ಕನ್ನು ಶುಕ್ರವಾರ ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್, ಸಾಮಾಜಿಕ ಮಾಧ್ಯಮದಲ್ಲಿ ಅವರ ವಿರುದ್ಧ ಹಂಚಿಕೆಯಾಗುತ್ತಿರುವ ಕೃತಕ ಬುದ್ಧಿಮತ್ತೆ ಚಾಲಿತ ವಿಡಿಯೊಗಳು ಹಾಗೂ ಡೀಪ್ ಫೇಕ್ ವಿಡಿಯೊಗಳನ್ನು ಇನ್ನು 48 ಗಂಟೆಗಳೊಳಗೆ ತೆಗೆದು ಹಾಕಬೇಕು ಎಂದು ಮಧ್ಯಂತರ ಆದೇಶ ಹೊರಡಿಸಿದೆ.

ಪತ್ರಕರ್ತ ಸುಧೀರ್ ಚೌಧರಿ ತಮ್ಮ ವ್ಯಕ್ತಿತ್ವದ ಹಕ್ಕಿನ ರಕ್ಷಣೆ ಕೋರಿ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ಹಂಚಿಕೆಯಾಗುತ್ತಿರುವ ದಾರಿತಪ್ಪಿಸುವ ಕೃತಕ ಬುದ್ಧಿಮತ್ತೆ ಚಾಲಿತ ವಿಡಿಯೊಗಳನ್ನು ತೆಗೆದು ಹಾಕಲು ಆದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮನ್ಮೀತ್ ಪ್ರೀತಂ ಸಿಂಗ್ ಅರೋರಾ, ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಲಿಂಕ್ ಗಳೊಂದಿಗೆ, ಯೂಟ್ಯೂಬ್ ನಲ್ಲಿನ ಡೀಪ್ ಫೇಕ್ ವಿಡಿಯೊಗಳಿಗೆ ಸಂಬಂಧಿಸಿದ ಹೆಚ್ಚುವರಿ ಲಿಂಕ್ ಗಳನ್ನೂ ಸೇರ್ಪಡೆ ಮಾಡಲು ಸುಧೀರ್ ಚೌಧರಿ ಬಯಸಿದ್ದಾರೆ ಎಂದು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಸುಧೀರ್ ಚೌಧರಿ ಅವರು ಆದೇಶದ ಪ್ರತಿಯನ್ನು ಪ್ರತಿವಾದಿ ಸಂಸ್ಥೆಗಳು ಹಾಗೂ ಗೂಗಲ್ ಗೆ ರವಾನಿಸಲಿದ್ದಾರೆ. ಪ್ರತಿವಾದಿ ಸಂಸ್ಥೆಗಳು ಇನ್ನು 48 ಗಂಟೆಗಳೊಳಗೆ ವ್ಯಕ್ತಿತ್ವದ ಹಕ್ಕನ್ನು ಉಲ್ಲಂಘಿಸಿರುವ ಲಿಂಕ್ ಗಳನ್ನು ತೆಗೆದು ಹಾಕಲಿವೆ ಎಂದು ನ್ಯಾಯಾಲಯ ಹೇಳಿದೆ.

ಒಂದು ವೇಳೆ ಇದರಲ್ಲಿ ವಿಫಲವಾದರೆ, ಎರಡನೆ ಪ್ರತಿವಾದಿಯಾದ ಗೂಗಲ್ ಈ ಲಿಂಕ್ ಗಳನ್ನು ತೆಗೆದು ಹಾಕಲಿದೆ ಎಂದೂ ನ್ಯಾಯಾಲಯ ತಿಳಿಸಿದೆ. ಇನ್ನು ಮೂರು ವಾರಗಳೊಳಗೆ ಮೂಲ ಚಂದಾದಾರರ ಮಾಹಿತಿಯ ವಿವರಗಳನ್ನು ಪ್ರತಿವಾದಿ ಸಂಸ್ಥೆಗಳು ಹಂಚಿಕೊಳ್ಳಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.

ಪ್ರತಿವಾದಿ ಸಂಸ್ಥೆಗಳ ಗುರುತು ತಿಳಿಯದ ಮೂಲ ಚಂದಾದಾರರ ಮಾಹಿತಿಯ ವಿವರಗಳನ್ನು ಸ್ವೀಕರಿಸಿದ ನಂತರ, ಸುಧೀರ್ ಚೌಧರಿ ಅವರು ಪ್ರತಿವಾದಿಗಳ ತಿದ್ದುಪಡಿ ಮಾಡಿದ ಮೆಮೊವನ್ನು ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಾಲಯ, ಸಮನ್ಸ್ ಗಳನ್ನೂ ಜಾರಿಗೊಳಿಸಿತು. ಆದರೆ, ಮೆಟಾ ಮತ್ತು ಗೂಗಲ್ ಪ್ರತಿವಾದಿ ಸಂಸ್ಥೆಗಳಲ್ಲದೆ ಇರುವುದರಿಂದ, ಅವಕ್ಕೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಲಿಲ್ಲ.

ದಾವೆಯ ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ವಿಡಿಯೊ ತುಣುಕಿನಂತೆಯೇ ಕಂಡು ಬರುವ ವಿಡಿಯೊ ತುಣುಕುಗಳನ್ನು ಇನ್ನು 48 ಗಂಟೆಗಳೊಳಗಾಗಿ ತೆಗೆದು ಹಾಕಬೇಕು ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಗೂಗಲ್ ಹಾಗೂ ಮೆಟಾ ವೇದಿಕೆಗಳಿಗೆ ಮಾಹಿತಿ ನೀಡುವಂತೆಯೂ ಸುಧೀರ್ ಚೌಧರಿ ಅವರಿಗೆ ನ್ಯಾಯಾಲಯ ಸೂಚಿಸಿತು.

ಮೆಟಾ ಸಾಮಾಜಿಕ ಮಾಧ್ಯಮ ವೇದಿಕೆ ಸೇರಿದಂತೆ ವಿವಿಧ ಪರಿಚಿತ ಮತ್ತು ಅಪರಿಚಿತ ಸಾಮಾಜಿಕ ಮಾಧ್ಯಮ ವೇದಿಕೆ ಸಂಸ್ಥೆಗಳ ವಿರುದ್ಧ ಸುಧೀರ್ ಚೌಧರಿ ದಾವೆ ಹೂಡಿದ್ದಾರೆ. ಅವರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ರಾಜಶೇಖರ್ ರಾವ್, ಯೂಟ್ಯೂಬ್ ವಿಡಿಯೊಗಳು ಕೃತಕ ಬುದ್ಧಿಮತ್ತೆ ಚಾಲಿತವಾಗಿ ಸೃಷ್ಟಿಸಲಾಗಿರುವ ವಿಡಿಯೊಗಳಾಗಿವೆ. ಈ ಎಲ್ಲ ವಿಡಿಯೊಗಳೂ ಅನಧಿಕೃತ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

"ಈ ಯಾವ ಹೇಳಿಕೆಗಳೂ ನನ್ನ ಕಕ್ಷಿದಾರನದಲ್ಲ ಅಥವಾ ನನ್ನದೆಂದು ಆರೋಪಿಸಲಾಗಿರುವ ಕೆಲವು ಹೇಳಿಕೆಗಳನ್ನು ನನ್ನ ಕಕ್ಷಿದಾರ ನೀಡಿಲ್ಲ" ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಅಕ್ಟೋಬರ್ 20ರಂದು ಸುಧೀರ್ ಚೌಧರಿಯ ಪ್ರಮಾಣ ಪತ್ರದೊಂದಿಗೆ ಹೆಚ್ಚುವರಿ ಲಿಂಕ್ ಗಳನ್ನು ಒದಗಿಸಲಾಗುವುದು. ಇಂದು ನೀಡಲಾಗಿರುವ ತಡೆಯಾಜ್ಞೆಯನ್ನು ಈ ಹೆಚ್ಚುವರಿ ಲಿಂಕ್ ಗಳಿಗೂ ವಿಸ್ತರಿಸಬೇಕು ಎಂದು ವಕೀಲ ರಾಜಶೇಖರ್ ರಾವ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಈ ದಾವೆ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಸಂಸ್ಥೆಗಳ ಸಾಮಾಜಿಕ ಮಾಧ್ಯಮ ಖಾತೆದಾರರಿಗೆ ಸಂಬಂಧಿಸಿದ ಲಿಂಕ್ ಗಳನ್ನು ಪತ್ತೆ ಹಚ್ಚಲಾಗಿದ್ದು, ಈ 3-15 ಮಂದಿ ಈಗಾಗಲೇ ಈ ದಾವೆಯಲ್ಲಿ ಪ್ರತಿವಾದಿಗಳಾಗಿದ್ದಾರೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಇತ್ತೀಚೆಗೆ 'ದಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್' ನ ಸಂಸ್ಥಾಪಕ ರವಿಶಂಕರ್, ತೆಲುಗು ನಟ ನಾಗಾರ್ಜುನ, ಬಾಲಿವುಡ್ ನಟರಾದ ಐಶ್ವರ್ಯ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಯನ್ನು ಎತ್ತಿ ಹಿಡಿದಿದ್ದ ಸಮನ್ವಯ ಪೀಠಗಳು, ಈ ಸಂಬಂಧ ಆದೇಶಗಳನ್ನು ಹೊರಡಿಸಿದ್ದವು.

ಈ ದಾವೆಯನ್ನು ವಕೀಲೆ ರುದ್ರಾಲಿ ಪಾಟೀಲ್ ಮೂಲಕ ದಾಖಲಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries