ನವದೆಹಲಿ: 3ಜಿ, 4ಜಿ ರೇಸ್ನಲ್ಲಿ ಯಾವಾಗಲೂ ಹಿಂದುಳಿದಿದ್ದ ಭಾರತ ಇದೀಗ 6ಜಿ ಅಭಿವೃದ್ಧಿಯಲ್ಲಿ (6G network) ಜಗತ್ತಿನ ಬಲಾಢ್ಯ ದೇಶಗಳ ಜೊತೆ ಸರಿಸಮಾನವಾಗಿ ಹೆಜ್ಜೆ ಹಾಕಲು ಅಣಿಗೊಂಡಿದೆ. 2027ರೊಳಗೆ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪ ತೊಟ್ಟಿರುವ ಸರ್ಕಾರ ಇದೀಗ 6ಜಿ ಅಭಿವೃದ್ಧಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ.
ಜಾಗತಿಕ ಪರಿಣಿತರ ಜೊತೆ ಸಹಭಾಗಿತ್ವ (global collaboration), ದೇಶೀಯವಾಗಿ ಆವಿಷ್ಕಾರಗಳು, ಉತ್ಕೃಷ್ಟ ಆರ್ ಅಂಡ್ ಡಿ ಇತ್ಯಾದಿ ಮೂಲಕ 6ನೇ ತಲೆಮಾರಿನ ವೈರ್ಲೆಸ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸುವ ಕನಸು ಭಾರತದ್ದಾಗಿದೆ. ಭವಿಷ್ಯದ ಟೆಲಿಕಾಂ ತಂತ್ರಜ್ಞಾನಗಳಿಗೆ ಭಾರತವೇ ಜಾಗತಿಕ ಕೇಂದ್ರವಾಗಬೇಕೆಂದು ಹೊರಟಿದೆ.
ಏನಿದು 6ಜಿ ಟೆಕ್ನಾಲಜಿ?
6ಜಿ ಎಂದರೆ ಆರನೇ ತಲೆಮಾರಿನ ವೈರ್ಲೆಸ್ ಟೆಕ್ನಾಲಜಿ. ಈಗ 5ಜಿ ನೆಟ್ವರ್ಕ್ ಎಲ್ಲೆಡೆ ಅಳವಡಿಕೆ ಆಗುತ್ತಿದೆ. ಮೊದಲಿಗೆ 2ಜಿ ಬಂತು, ನಂತರ 3ಜಿ, 4ಜಿ ಬಂತು. 5ಜಿ ಈಗ ಅಡಿ ಇಟ್ಟಾಗಿದೆ. 6ಜಿಯನ್ನು ವಿಶ್ವದ ಹಲವೆಡೆ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೆಡೆ 7ಜಿ ತಂತ್ರಜ್ಞಾನದ ಆಲೋಚನೆಯೂ ನಡೆದಿದೆ.
5ಜಿಗೆ ಹೋಲಿಸಿದರೆ 6ಜಿ ನೆಟ್ವರ್ಕ್ ಬಹಳ ಚುರುಕಾಗಿರುತ್ತದೆ. 1,000 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ದೊರಕುತ್ತದೆ. 6ಜಿ ಜೊತೆಗೆ ಎಐ ಆವಿಷ್ಕಾರಗಳೂ ಸೇರಿಬಿಟ್ಟರೆ ಶಕ್ತಿಶಾಲಿ ದೂರವಾಣಿ ಮತ್ತು ಇಂಟರ್ನೆಟ್ ತಂತ್ರಜ್ಞಾನಗಳು ಹೊರಹೊಮ್ಮಲಿವೆ. ರೋಬೋಟಿಕ್ಸ್, ರಿಯಲ್ ಟೈಮ್ ಗೇಮಿಂಗ್, ರಿಮೋಟ್ ಮೆಡಿಕಲ್ ಸರ್ಜರಿ ಇತ್ಯಾದಿ ಬಹಳ ಉಪಯುಕ್ತವಾದ ಕಾರ್ಯಗಳು ಸುಲಭಗೊಳ್ಳುತ್ತವೆ.
ಯಾವಾಗ ಬರುತ್ತದೆ 6ಜಿ?
ಎರಡು ವರ್ಷದ ಹಿಂದೆಯೇ ಭಾರತವು 6ಜಿ ವಿಶನ್ ಅನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ 2030ರೊಳಗೆ ಭಾರತದಲ್ಲಿ 6ಜಿಯನ್ನು ಅಳವಡಿಸುವ ಗುರಿ ಇಡಲಾಗಿದೆ. ಅದಕ್ಕೆ ಪೂರಕವಾದ ಮೂಲಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ. 6ಜಿ ತಂತ್ರಜ್ಞಾನ ಅಭಿವೃದ್ಧಿಗೆ ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜಿಸಲು 106 ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ.
ಭಾರತ್ 6ಜಿ ಮೈತ್ರಿಯನ್ನು ರಚಿಸಲಾಗಿದೆ. ಇದರಲ್ಲಿ ಸ್ಪೆಕ್ಟ್ರಂ, ಟೆಕ್ನಾಲಜಿ, ಆ್ಯಪ್ ಇತ್ಯಾದಿ ಏಳು ವರ್ಕಿಂಗ್ ಗ್ರೂಪ್ಗಳಿವೆ. ಅಮೆರಿಕ, ಯೂರೋಪ್, ಫಿನ್ಲೆಂಡ್, ಸೌತ್ ಕೊರಿಯಾ, ಜಪಾನ್ ಇತ್ಯಾದಿ ದೇಶಗಳಲ್ಲಿ 6ಜಿ ಅಭಿವೃದ್ಧಿಗೆ ಸಂಘಟನೆಗಳು ನಿರತವಾಗಿವೆ. ಅವುಗಳ ಜೊತೆ ಭಾರತ್ 6ಜಿ ಅಲಾಯನ್ಸ್ ಕೂಡ ಕೈಜೋಡಿಸಿ ಕೆಲಸ ಮಾಡುತ್ತದೆ. ಈ ಮೂಲಕ ಜಾಗತಿಕ ಪ್ರಮುಖ ಶಕ್ತಿಗಳೊಂದಿಗೆ ಸರಿಸಮಾನವಾಗಿ 6ಜಿಯತ್ತ ಭಾರತವೂ ಹೆಜ್ಜೆ ಹಾಕುತ್ತದೆ.




