ನವದೆಹಲಿ: ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (ಪಿಎಂಯುವೈ) 25 ಲಕ್ಷ ಹೆಚ್ಚುವರಿ ಎಲ್‌ಪಿಜಿ ಸಂಪರ್ಕಗಳನ್ನು ಮಂಜೂರು ಮಾಡಿದೆ. ಇದರಿಂದಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಚಂದಾದಾರರ ಒಟ್ಟು ಸಂಖ್ಯೆಯನ್ನು 10.58 ಲಕ್ಷ ಎಂದು ಅಂದಾಜಿಸಲಾಗಿದೆ.
ಕಳೆದ ಜುಲೈ ಹೊತ್ತಿಗೆ ದೇಶದಾದ್ಯಂತ 10.33 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ವಿತರಿಸಲಾಗಿದ್ದು, ಇದು ವಿಶ್ವದ ಅತಿದೊಡ್ಡ ಶುದ್ಧ ಇಂಧನ ಉಪಕ್ರಮಗಳಲ್ಲಿ ಒಂದು ಎನ್ನಲಾಗಿದೆ. ಅಲ್ಲದೆ ಈಗ ಎಲ್‌ಪಿಜಿ ಸಿಲಿಂಡರ್ ಕೇವಲ 500 ರೂಪಾಯಿಗೆ ಗ್ರಾಹಕರ ಕೈಸೇರಲಿದೆ. ಅದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕೇಂದ್ರ ಸರ್ಕಾರವು ಈ 25 ಲಕ್ಷ ಹೆಚ್ಚುವರಿ ಅಡುಗೆ ಅನಿಲ ಸಂಪರ್ಕಗಳನ್ನು ನಿರ್ದಿಷ್ಟವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 2025-26ನೇ ಸಾಲಿನ ಹಣಕಾಸು ವರ್ಷಕ್ಕೆ ಮಂಜೂರು ಮಾಡಿದೆ. ಇದು ಮಹಿಳಾ ಸಬಲೀಕರಣದತ್ತ ಒಂದು ಮಹತ್ವದ ಹೆಜ್ಜೆ ಎಂದು ಹೇಳಿದೆ. ಈ ಹೆಚ್ಚುವರಿ ಸಂಪರ್ಕಕ್ಕಾಗಿ ಸರ್ಕಾರವು 676 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಹೀಗಾಗಿ ಸದ್ಯದಲ್ಲೇ ಎಲ್‌ಪಿಜಿ ದರವು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದರಲ್ಲಿ ಪ್ರತಿ ಸಂಪರ್ಕಕ್ಕೆ 2,050 ರೂಪಾಯಿಗಳಂತೆ 25 ಲಕ್ಷ ಠೇವಣಿ ರಹಿತ ಸಂಪರ್ಕಗಳನ್ನು ಒದಗಿಸಲು 512.5 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇನ್ನು 14.2 ಕೆ.ಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 300 ರೂಪಾಯಿಗಳ ಸಬ್ಸಿಡಿಗಾಗಿ 160 ಕೋಟಿ ರೂಪಾಯಿಗಳು, ಯೋಜನಾ ನಿರ್ವಹಣೆ, ವಹಿವಾಟು ಮತ್ತು ಎಸ್‌ಎಂಎಸ್ ಶುಲ್ಕಗಳು ಹಾಗೂ ಜಾಗೃತಿ ಅಭಿಯಾನ, ಆಡಳಿತಾತ್ಮಕ ವೆಚ್ಚಕ್ಕಾಗಿ ಸುಮಾರು 35 ಕೋಟಿ ರೂಪಾಯಿ ಒಳಗೊಂಡಿದೆ.
2016ರ ಮೇ ತಿಂಗಳಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 8 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ಠೇವಣಿ ಇಲ್ಲದೆ ವಿತರಿಸಲು ಸ್ಥಾಪಿಸಲಾಯಿತು. ಅದರಂತೆ 2019ರ ವೇಳೆಗೆ ಈ ಗುರಿಯನ್ನು ಸಾಧಿಸಲಾಗಿತ್ತು. ಬಡ ಕುಟುಂಬಗಳಿಗೆ ಹೆಚ್ಚಿನ ಎಲ್‌ಪಿಜಿ ಒದಗಿಸಲು, ಉಜ್ವಲ 2.0 ಯೋಜನೆಯನ್ನ 2021ರಲ್ಲಿ ಪ್ರಾರಂಭಿಸಲಾಯಿತು. ಜನವರಿ 2022ರ ವೇಳೆಗೆ ಠೇವಣಿ ಇಲ್ಲದೆ ಹೆಚ್ಚುವರಿಯಾಗಿ 1 ಕೋಟಿ ಎಲ್‌ಪಿಜಿ ಸಂಪರ್ಕ ನೀಡುವ ಗುರಿ ಹೊಂದಿತ್ತು. ಬಳಿಕ ಕೇಂದ್ರ ಸರ್ಕಾರವು ಉಜ್ವಲ 2.0 ಯೋಜನೆಯಡಿ 60 ಲಕ್ಷ ಸಂಪರ್ಕಗಳನ್ನು ಹೆಚ್ಚುವರಿಯಾಗಿ ಅನುಮೋದಿಸಿತು. ಕಳೆದ ಜುಲೈ ವೇಳೆಗೆ ದೇಶದಲ್ಲಿ 10.33 ಕೋಟಿಗೂ ಹೆಚ್ಚು ಪಿಎಂಯುವೈ ಸಂಪರ್ಕಗಳನ್ನು ನೀಡಲಾಗಿತ್ತು.

ನವೆಂಬರ್‌ನಿಂದ ದರ ಇಳಿಕೆ?
ನವೆಂಬರ್‌ನಿಂದ ಎಲ್‌ಪಿಜಿ ದರವು ಅಗ್ಗವಾಗಲಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ಎಲ್‌ಪಿಜಿ ಬೆಲೆ ₹250ರಿಂದ ₹300 ರಷ್ಟು ಇಳಿಕೆ ಕಾಣಲಿದೆ ಎಂಬ ಸುದ್ದಿ ವರದಿಯಾಗಿದ್ದು, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬಳಕೆದಾರರು ಖುಷಿಪಡುತ್ತಿದ್ದಾರೆ. ಬಿಹಾರದಲ್ಲಿ ಕೂಡ ಸದ್ಯದಲ್ಲೇ ಎಲ್‌ಪಿಜಿ ಅಗ್ಗದ ದರಕ್ಕೆ ಸಿಗುವ ಸಾಧ್ಯತೆ ಇದೆ. ಅಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ, ಮುಂದೆ ಆರ್‌ಜೆಡಿ ಸರ್ಕಾರ ರಚನೆಯಾದರೆ, ಮಹಾಘಟಬಂಧನ್ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕೇವಲ 500 ರೂಪಾಯಿಗೆ ನೀಡಲಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಭರವಸೆ ನೀಡಿದ್ದಾರೆ.




