ಬೆಂಗಳೂರು : ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್, ಡಾ.ಎಂ.ಬಸವಣ್ಣ, ಪ್ರತಿಭಾ ನಂದಕುಮಾರ್, ಡಾ.ಡಿ.ಬಿ.ನಾಯಕ್, ಡಾ.ವಿಶ್ವನಾಥ್ ಕಾರ್ನಾಡ್ ಅವರು ಕರ್ನಾಟಕ ಸಾಹಿತ್ಯ ಅಕಾಡಮಿಯ 2024ನೇ ವರ್ಷದ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.
ಗುರುವಾರ ನಗರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ 5 ಜನ ಸಾಹಿತಿಗಳಿಗೆ ಸಾಹಿತ್ಯ ಅಕಾಡಮಿಯ ಸರ್ವ ಸದಸ್ಯರ ಸಭೆಯಲ್ಲಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಗೌರವ ಪ್ರಶಸ್ತಿ 50 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು.
2023ನೇ ಸಾಲಿನ ವರ್ಷದ ಪುಸ್ತಕ ಬಹುಮಾನಕ್ಕೆ ಡಾ.ಲಕ್ಷ್ಮಣ ವಿ.ಎ ಅವರ ಕಾಯಿನ್ ಬೂತ್, ಡಾ.ಬಿ.ಎಂ.ಗುರುನಾಥ ಅವರ ನಕ್ಷತ್ರ ತಬ್ಬಿ ಮಲಗಿದ ಹೊತ್ತು, ಗಂಗಪ್ಪ ತಳವಾರ್ ಅವರ ಧಾವತಿ, ಮಾಧವಿ ಭಂಡಾರಿ ಕೆರೆಕೋಣ ಅವರ ಗುಲಾಬಿ ಕಂಪಿನ ರಸ್ತೆ, ಡಾ.ಸಾಸ್ವೇಹಳ್ಳಿ ಸತೀಶ್ ಅವರ ಏಸೂರು ಕೊಟ್ಟರೂ ಈಸೂರು ಕೊಡೆವು, ಸರಸ್ವತಿ ಭೋಸಲೆ ಅವರ ಕಾಡತಾವ ನೆನಪ, ಡಾ.ಡಿ.ವಿ.ಗುರುಪ್ರಸಾದ್ ಅವರ ಮಾಯನ್ನರ ಮಾಯಾನಗರಿ ಮೆಕ್ಸಿಕೋದಲ್ಲೊಂದು ಸುತ್ತು, ಡಾ.ಸಿ.ಚಂದ್ರಪ್ಪ ಅವರ ಅಶೋಕ ಸತ್ಯ-ಅಹಿಂಸೆಯ ಮಹಾಶಯ, ರಂಗನಾಥ ಕಂಟನಕುಂಟೆ ಅವರ ಓದಿನ ಒಕ್ಕಲು, ಮತ್ತೂರು ಸುಬ್ಬಣ್ಣ ಅವರ ಮುತ್ತಳ್ಳಿಯ ಅಜ್ಜಿ ಕಥೆಗಳು, ಡಾ.ಎಚ್.ಎಸ್.ಮೋಹನ್ ಅವರ ಕಣ್ಣಿನಲ್ಲಿ ಕಂಡ ಮೃತ್ಯುಬಿಂಬ ಮತ್ತು ಇತರ ವೈದ್ಯಕೀಯ ಲೇಖನಗಳು, ಡಾ.ಪ್ರಕಾಶ್ ಭಟ್ ಅವರ ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ಕಾಡುಗೊಲ್ಲ ಬುಡಕಟ್ಟು, ಡಾ.ಜೆ.ಪಿ.ದೊಡಮನಿ ಅವರ ಡಾ.ಬಾಬಾ ಸಾಹೇಬ ಅಂಬೇಡ್ಕರ-ಜೀವನ ಚರಿತ್ರೆ, ದೇವು ಪತ್ತಾರ ಅವರ ಈಶಾನ್ಯೆ ಒಡಲು, ಸತೀಶ್ ತಿಪಟೂರು ಅವರ ಮಣ್ಣಿನ ಬಂಡಿಯಲ್ಲಿ ಫುಕುವೋಕಾ, ಗೋವಿಂದಾಜು ಎಂ. ಕಲ್ಲೂರು ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿಗಳು ಆಯ್ಕೆಯಾಗಿವೆ. ಪುಸ್ತಕ ಬಹುಮಾನವು 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
2023ನೇ ವರ್ಷದ ಕರ್ನಾಟಕ ಸಾಹಿತ್ಯ ಅಕಾಡಮಿಯ ದತ್ತಿ ಬಹುಮಾನಕ್ಕೆ ಡಾ.ಲತಾ ಗುತ್ತಿ ಅವರ ಚದುರಂಗ ಕೃತಿಗೆ ಚದುರಂಗ ದತ್ತಿ ಬಹುಮಾನ, ಸುಮಾ ರಮೇಶ್ ಅವರ ಹಚ್ಚೆ ದಿನ್-ಬೆಚ್ಚಗಿನ ನಗೆಯೊಂದಿಗೆ ಕೃತಿಯು ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ, ರೂಪ ಹಾಸನ ಅವರ ಮಹಾಸಂಗ್ರಾಮಿ ಎಸ್.ಆರ್.ಹಿರೇಮಠ ಕೃತಿಯು ಸಿಂಪಿ ಲಿಂಗಣ್ಣ ದತ್ತಿ ಬಹುಮಾನ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ಇರವಿನ ಅರಿವು ಕೃತಿಯು ಪಿ.ಶ್ರೀನಿವಾಸರಾವ್ ದತ್ತಿ ಬಹುಮಾನ, ಟಿ.ಜಿ.ಪುಷ್ಪಲತಾ ಅವರ ಕೇದಿಗೆ ಕೃತಿಯು ಚಿ.ಶ್ರೀನಿವಾಸರಾಜು ದತ್ತಿ ಬಹುಮಾನ, ರೋಸಿ ಡಿಸೋಜಾ ಅವರು ಅನುವಾದಿಸಿರುವ ಎಚ್.ಡಿ.ದೇವೇಗೌಡರ ಬದುಕು ಮತ್ತು ದುಡಿಮೆ ನೇಗಿಲ ಗೆರೆಗಳು ಕೃತಿಯು ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಬಹುಮಾನ, ಅಬ್ಬೂರು ಪ್ರಕಾಶ್ ಅವರ ಕಣ್ಣ ಕನ್ನಡಿಯಲ್ಲಿ ಕೃತಿಗಳು ಮಧುರಚೆನ್ನ ದತ್ತಿ ಬಹುಮಾನ, ಸುದೇಶ ದೊಡ್ಡಪಾಳ್ಯ ಅವರ ಈಶಾನ್ಯದ ದಿಕ್ಕಿನಿಂದ ಕೃತಿಯು ಬಿ.ವಿ.ವೀರಭದ್ರಪ್ಪ ದತ್ತಿ ಬಹುಮಾನ, ಸುಕನ್ಯಾ ಕನಾರಳ್ಳಿ ಅವರು ಅನುವಾದಿಸಿರುವ ಲವ್ ಆಂಡ್ ವಾಟರ್ ಫ್ಲೋ ಟುಗೆಧರ್ ಕೃತಿಯು ಅಮೆರಿಕನ್ನಡ ದತ್ತಿನಿಧಿ ಬಹುಮಾನಕ್ಕೆ ಆಯ್ಕೆಯಾಗಿವೆ. ದತ್ತಿ ಬಹುಮಾನವು 10 ಸಾವಿರದಿಂದ 25 ಸಾವಿರ ರೂ. ನಗದು ಒಳಗೊಂಡಿವೆ ಎಂದು ತಿಳಿಸಿದರು.
ಡಾ.ಅನುಪಮಾ, ಡಾ.ಕೆ.ವೈ.ಎನ್ ಸೇರಿ 10 ಮಂದಿಗೆ ʼಸಾಹಿತ್ಯಶ್ರೀ ಪ್ರಶಸ್ತಿʼ
ಸಾಹಿತಿಗಳಾದ ಡಾ.ಎಚ್.ಎಸ್.ಅನುಪಮಾ, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಮಮತಾ ಸಾಗರ, ಡಾ.ಬಿ.ಎಂ.ಪುಟ್ಟಯ್ಯ, ಪದ್ಮಾಲಯ ನಾಗರಾಜ್, ಡಾ.ಬಿ.ಯು.ಸುಮಾ, ಡಾ.ಸಬಿತಾ ಬನ್ನಾಡಿ, ಅಬ್ದುಲ್ ಹೈ ತೋರಣಗಲ್, ಡಾ.ಗುರುಲಿಂಗಪ್ಪ ದಬಾಲೆ, ಡಾ.ಅಮರೇಶ್ ಯತಗಲ್ ಅವರು 2024ನೇ ಸಾಲಿನ 'ಸಾಹಿತ್ಯಶ್ರೀ' ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು 25 ಸಾವಿರ ರೂ. ನಗದು, ಶಾಲು, ಹಾರ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಪ್ರೊ.ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.

