ಕೊಚ್ಚಿ: ಕೇರಳದಾದ್ಯಂತ 644 ಕಿಮೀ ರಾ.ಹೆದ್ದಾರಿ 66 ರಲ್ಲಿ ಆರು ಪಥಗಳ ಕಾಮಗಾರಿಯ ಅರ್ಧಕ್ಕಿಂತ ಹೆಚ್ಚಿನದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಈ ವರ್ಷದ ಅಂತ್ಯದ ವೇಳೆಗೆ ಸುಮಾರು 145 ಕಿಮೀ ಉದ್ದದ ನಾಲ್ಕು ಪ್ರಮುಖ ಪಥಗಳನ್ನು ಸಂಚಾರಕ್ಕೆ ತೆರೆಯುವ ನಿರೀಕ್ಷೆಯಿದೆ ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿ ವರದಿ ಮಾಡಲಾಗಿದೆ. ಆದರೆ ವೇಗದ ಪ್ರಯಾಣದ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.
ಸಂಪೂರ್ಣ ಕೆಲಸ ಪೂರ್ಣಗೊಂಡಾಗ, ರಾಜ್ಯದಲ್ಲಿ ಎನ್.ಎಚ್. 66 ರಲ್ಲಿ ಒಟ್ಟು 13 ಟೋಲ್ ಪ್ಲಾಜಾಗಳು ಬರಬಹುದು. 11 ಟೋಲ್ ಪ್ಲಾಜಾಗಳ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ. ಇನ್ನೂ ಎರಡು ಪರಿಗಣನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಪ್ಲಾಜಾಗಳಲ್ಲಿ ಮೊದಲನೆಯದು ಈ ವಾರ ಪಂತರಂಗಾವಿನ ಮಾಂಪುಳಪಾಲಂನಲ್ಲಿ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ.
ಆಲಪ್ಪುಳದ ಕೃಪಾಸನಂ ಬಳಿಯ ಎರಮಲ್ಲೂರು (ಅರೂರ್-ತುರವೂರ್ ಎಲಿವೇಟೆಡ್ ಹೆದ್ದಾರಿ), (ತುರವೂರ್-ಪರವೂರ್ ಮಾರ್ಗ) ಮತ್ತು ಓಚಿರಾ (ಪರವೂರ್-ಕೊಟ್ಟುಕುಲಂಗರ) ಗಳಲ್ಲಿ ಮೂರು ಟೋಲ್ ಬೂತ್‍ಗಳು ಸ್ಥಾಪನೆಯಾಗಲಿವೆ.
ಟೋಲ್ ದರಗಳ ನಿರ್ಧಾರ ಅಂತಿಮ ಹಂತದಲ್ಲಿದೆ. ಏತನ್ಮಧ್ಯೆ, ಹೆದ್ದಾರಿಯಲ್ಲಿರುವ ತಿರುವಲ್ಲಂ, ಕುಂಬಳೆ ಮತ್ತು ತಿರುವಂಗಾಡ್‍ನಲ್ಲಿ ಅಸ್ತಿತ್ವದಲ್ಲಿರುವ ಟೋಲ್ ಪ್ಲಾಜಾಗಳು ಕಾರ್ಯನಿರ್ವಹಿಸುತ್ತಿವೆ.
ಡಿಸೆಂಬರ್‍ನಲ್ಲಿ ತೆರೆಯಲು ನಿಗದಿಪಡಿಸಲಾದ ನಾಲ್ಕು ರೀಚ್‍ಗಳಲ್ಲಿ, ಯುಎಲ್‍ಸಿಸಿಎಸ್ ನಿರ್ಮಿಸುತ್ತಿರುವ ಕಾಸರಗೋಡಿನ 39 ಕಿ.ಮೀ. ತಲಪ್ಪಾಡಿ-ಚೆಂಗಳ ಮಾರ್ಗವನ್ನು ಈಗಾಗಲೇ ಸಂಚಾರಕ್ಕೆ ತೆರೆಯಲಾಗಿದೆ.
ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿರುವ ಇತರ ಮೂರು ರೀಚ್‍ಗಳು ರಾಮನಾಟುಕರ-ವಲಂಚೇರಿ, ವಲಂಚೇರಿ-ಕಪ್ಪಿರಿಕಾಡ್ ಮತ್ತು ವೆಂಗಲಂ-ರಾಮನಾಟುಕರ ಜಂಕ್ಷನ್.
ರಾಮನಾಟ್ಟುಕರ-ವಲಂಚೇರಿ ಮಾರ್ಗವು 39.68 ಕಿ.ಮೀ ಉದ್ದವಾಗಿದೆ. ಶೇಕಡಾ 99.36 ರಷ್ಟು ಕೆಲಸ ಪೂರ್ಣಗೊಂಡಿದೆ. ವಲಂಚೇರಿ-ಕಪ್ಪಿರಿಕಾಡ್ ಮಾರ್ಗವು 37.35 ಕಿ.ಮೀ ಉದ್ದವಾಗಿದೆ. ಶೇಕಡಾ 98.65 ರಷ್ಟು ಕೆಲಸ ಪೂರ್ಣಗೊಂಡಿದೆ.
ವೆಂಗಲಂ-ರಾಮನಾಟ್ಟುಕರ ಜಂಕ್ಷನ್ ಮಾರ್ಗವು 28.4 ಕಿ.ಮೀ ಉದ್ದವಾಗಿದೆ. ಶೇಕಡಾ 80 ರಷ್ಟು ಕೆಲಸ ಪೂರ್ಣಗೊಂಡಿದೆ. ಚೆಂಗಳದಿಂದ ನೀಲೇಶ್ವರ, ನೀಲೇಶ್ವರಂನಿಂದ ತಳಿಪರಂಬ ಮತ್ತು ತಾಲಿಕ್ಕುಲಂನಿಂದ ಕೊಡುಂಗಲ್ಲೂರು ಸೇರಿದಂತೆ ಒಟ್ಟು 202 ಕಿ.ಮೀ ಉದ್ದದ ಇತರ ಆರು ಮಾರ್ಗಗಳ ಅಗಲೀಕರಣ ಕಾರ್ಯವು ಮಾರ್ಚ್ 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಮಧ್ಯೆ ಕುಂಬಳೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ನಿರ್ಮಾಣ ತಡೆಹಿಡಿಯಲು ಕ್ರಿಯಾ ಸಮಿತಿ ಸಕ್ರಿಯವಾಗಿದೆ.




