ನವದೆಹಲಿ: ಜೋಹೊ ಕಂಪನಿಯು ಅಭಿವೃದ್ಧಿಪಡಿಸಿದ ಅರಟ್ಟೈ ಆಯಪ್‌ಅನ್ನು ಶುಕ್ರವಾರದಿಂದ ಈಚೆಗೆ ಒಟ್ಟು 75 ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಜನರು ಈಚಿನ ದಿನಗಳಲ್ಲಿ ಸ್ಥಳೀಯ ಆಯಪ್ ಒಂದನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಡೌನ್‌ಲೋಡ್ ಮಾಡಿಕೊಂಡ ನಿದರ್ಶನಗಳಲ್ಲಿ ಇದೂ ಒಂದಾಗಿದೆ.
ಭಾರತದಲ್ಲೇ ಅಭಿವೃದ್ಧಿ ಆಗಿರುವ ಸಂದೇಶ ರವಾನೆ ಆಯಪ್ ಬಳಸುವಂತೆ ಕೆಲವು ಸಚಿವರು ಕರೆ ನೀಡಿರುವ ಸಂದರ್ಭದಲ್ಲಿ ಇಷ್ಟು ಸಂಖ್ಯೆಯಲ್ಲಿ ಈ ಆಯಪ್ ಡೌನ್‌ಲೋಡ್ ಆಗಿದೆ.
ಗೂಗಲ್‌ನ ಪ್ಲೇಸ್ಟೋರ್ ಹಾಗೂ ಆಯಪಲ್‌ನ ಆಯಪ್ ಸ್ಟೋರ್ ಮೂಲಕ ಅಕ್ಟೋಬರ್ 3ರವರೆಗೆ ಒಟ್ಟು 75 ಲಕ್ಷ ಮಂದಿ ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಕಂಪನಿಯು ತಿಳಿಸಿದೆ.
ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪೀಯೂಷ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಈ ಆಯಪ್‌ಅನ್ನು ಬಹಿರಂಗವಾಗಿ ಬೆಂಬಲಿಸಿ ಮಾತನಾಡಿದ್ದಾರೆ. ಇದಾದ ನಂತರದಲ್ಲಿ ಈ ಆಯಪ್‌ನ ಬಳಕೆ ಹೆಚ್ಚಾಗಿದೆ. ಈ 'ಸ್ವದೇಶಿ' ಆಯಪ್‌ಅನ್ನು ವಾಟ್ಸ್‌ಆಯಪ್‌ಗೆ ಪರ್ಯಾಯ ಎಂದು ಕಾಣಲಾಗಿದೆ.

