ಅಮರಾವತಿ: ಮೊಂಥಾ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ 87 ಸಾವಿರ ಎಕರೆ ಬೆಳೆ, 380 ಕಿ.ಮೀ ರಸ್ತೆ, 14 ಸೇತುವೆ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಪ್ರಾಥಮಿಕ ಪರಿಶೀಲನೆಯ ಮಾಹಿತಿಯನ್ನು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ನೀಡಿದ್ದಾರೆ.
304 ಮಂಡಲಗಳಲ್ಲಿ ಭತ್ತ, ಹತ್ತಿ, ಹೆಸರು, ಜೋಳದ ಬೆಳೆಗಳಿಗೆ ಹಾನಿಯಾಗಿದೆ. 59 ಸಾವಿರ ಎಕರೆ ಬೆಳೆ ನೀರಿನಲ್ಲಿ ಮುಳುಗಿವೆ, ಒಟ್ಟು 78,796 ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ರಸ್ತೆ, ಸೇತುವೆಗಳು ಹಾನಿಗೀಡಾಗಿದ್ದು, ಒಟ್ಟು ₹1,424 ಕೋಟಿ ನಷ್ಟವಾಗದೆ. ಹಳ್ಳಿಗಳಿಗೆ ನೀರಿನ ಸರಬರಾಜು ಸ್ಥಗಿತಗೊಂಡಿದ್ದು ₹36 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದಿಂದ 48 ಪುರಸಭೆಗಳ, 1,434 ಹಳ್ಳಿಗಳ, 18 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ. 1,209 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ. 3,175 ಗರ್ಭಿಣಿಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 2,130 ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿಬಿರಗಳಲ್ಲಿರುವವರಿಗೆ ಸೂಕ್ತ ವ್ಯವಸ್ಥೆ ಮಾಡುವುದು ಸೇರಿದಂತೆ, ಸ್ವಚ್ಛತೆ, ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಗಮನ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

