ಜೈಪುರ: ಇಲ್ಲಿಯ ಸವಾಯಿ ಮಾನಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯ ಟ್ರಾಮಾ ಸೆಂಟರ್‌ನ ಐಸಿಯುನಲ್ಲಿ ರವಿವಾರ ತಡರಾತ್ರಿ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.
ದಾಖಲೆಗಳು, ವೈದ್ಯಕೀಯ ಉಪಕರಣಗಳು ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸುವ ಟ್ಯೂಬ್‌ಗಳನ್ನು ಇರಿಸಲಾಗಿದ್ದ ನ್ಯೂರೊ ಐಸಿಯು ವಾರ್ಡ್‌ನ ಸ್ಟೋರ್ ರೂಮ್‌ನಲ್ಲಿ ರಾತ್ರಿ 11:20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು.
ಬೆಂಕಿ ಮತ್ತು ಹೊಗೆ ತ್ವರಿತವಾಗಿ ಇತರ ಕಡೆಗಳಿಗೆ ವ್ಯಾಪಿಸಿತ್ತು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಸಮಯದಲ್ಲಿ ಐಸಿಯುನಲ್ಲಿ 11 ರೋಗಿಗಳು ದಾಖಲಾಗಿದ್ದು, ಪಕ್ಕದ ವಾರ್ಡ್‌ನಲ್ಲಿ 13 ರೋಗಿಗಳಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತಲುಪಿದಾಗ ಇಡೀ ವಾರ್ಡ್ ಹೊಗೆಯಿಂದ ತುಂಬಿದ್ದು, ಒಳಪ್ರವೇಶಿಸುವುದೂ ಕಷ್ಟವಾಗಿತ್ತು. ಕಿಟಕಿಗಳ ಗಾಜನ್ನು ಒಡೆದು ನೀರನ್ನು ಒಳಗೆ ಹಾಯಿಸುವಂತಾಗಿತ್ತು ಎಂದು ಅಗ್ನಿಶಾಮಕ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಶ್ರಮಿಸಿದ ಬಳಿಕ ಬೆಂಕಿಯನ್ನು ಆರಿಸಲಾಗಿದ್ದು, ರೋಗಿಗಳನ್ನು ಅವರ ಹಾಸಿಗೆಗಳ ಸಹಿತ ತೆರವುಗೊಳಿಸಿ ರಸ್ತೆಪಕ್ಕದಲ್ಲಿ ಸ್ಥಳಾಂತರಿಸಲಾಗಿತ್ತು.
ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ರಾಜಸ್ಥಾನದ ಮಖ್ಯಮಂತ್ರಿ ಭಜನಲಾಲ್ ಶರ್ಮಾ ಅವರು ಗಾಯಾಳುಗಳ ಚಿಕಿತ್ಸೆಗೆ ಎಲ್ಲ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಇದು ತುಂಬ ದುಃಖಕರ ಮತ್ತು ಆತಂಕಕಾರಿ ಘಟನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಎಸ್‌ಎಂಎಸ್ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಅಗ್ನಿ ಅವಘಡದಲ್ಲಿ ರೋಗಿಗಳು ಮೃತಪಟ್ಟಿದ್ದು ಅತ್ಯಂತ ಹೃದಯ ವಿದ್ರಾವಕವಾಗಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳ ಶೀಘ್ರ ಚೇತರಿಕೆಯನ್ನು ಹಾರೈಸಿದ್ದಾರೆ.
ಭವಿಷ್ಯದಲ್ಲಿ ಎಲ್ಲಿಯೇ ಇಂತಹ ಅವಘಡಗಳನ್ನು ಮರುಕಳಿಸದಿರಲು ರಾಜ್ಯ ಸರಕಾರವು ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಎಂದು ಅವರು ಟ್ವೀಟಿಸಿದ್ದಾರೆ.




