HEALTH TIPS

Bihar Election | ಬುರ್ಖಾ ಧರಿಸುವವರ ಗುರುತು ಪರಿಶೀಲಿಸಿ: ECಗೆ ಬಿಜೆಪಿ ಆಗ್ರಹ

ಪಟ್ನಾ: ಮುಂಬರಲಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಒಂದು ಅಥವಾ ಎರಡು ಹಂತಗಳಲ್ಲಿ ನಡೆಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿರುವ ಬಿಜೆಪಿ, 'ಮತಗಟ್ಟೆಗಳಿಗೆ ಬುರ್ಖಾ ಧರಿಸಿ ಬರುವ ಮಹಿಳಾ ಮತದಾರರ ಚಹರೆಯನ್ನು ಅವರ ಮತದಾರರ ಚೀಟಿಯಲ್ಲಿನ ಭಾವಚಿತ್ರದ ಜತೆಗೆ ಸರಿಯಾಗಿ ಪರಿಶೀಲಿಸಬೇಕು' ಎಂದು ಒತ್ತಾಯಿಸಿದೆ.

ಒಂದು ಅಥವಾ ಎರಡು ಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂಬ ಬಿಜೆಪಿ ಬೇಡಿಕೆಗೆ ಸಹಮತ ವ್ಯಕ್ತಪಡಿಸಿರುವ ಪ್ರಮುಖ ವಿರೋಧ ಪಕ್ಷ ಆರ್‌ಜೆಡಿ, 'ಬುರ್ಖಾ ಧರಿಸುವ ಮಹಿಳಾ ಮತದಾರರ ಬಗ್ಗೆ ಪ್ರಶ್ನೆಗಳನ್ನೆತ್ತುವ ಮೂಲಕ ಬಿಜೆಪಿ ರಾಜಕೀಯ ಪಿತೂರಿ ಮಾಡುತ್ತಿದೆ' ಎಂದು ಆರೋಪಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ನೇತೃತ್ವದ ಚುನಾವಣಾ ಆಯೋಗದ ತಂಡ, ಬಿಹಾರ ಚುನಾವಣೆಯ ಸಿದ್ಧತೆ ಕುರಿತು ಶನಿವಾರ ಪಟ್ನಾದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಿತು. ಭಾನುವಾರವೂ ಪರಿಶೀಲನೆ ಮುಂದುವರಿಯಲಿದೆ.

ಆಯೋಗ ಶನಿವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿತು. ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದಕ್ಕೂ ಮುನ್ನ ಆಯೋಗ ಈ ರೀತಿಯ ಸಭೆ ನಡೆಸುವುದು ವಾಡಿಕೆಯಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲಿಪ್ ಜೈಸ್ವಾಲ್‌ ಅವರು ಬಿಜೆಪಿ ನಿಯೋಗದ ಮತ್ತು ಲೋಕಸಭಾ ಸದಸ್ಯ ಅಭಯ್‌ ಕುಶ್ವಾಹ ಅವರು ಆರ್‌ಜೆಡಿ ನಿಯೋಗದ ನೇತೃತ್ವವಹಿಸಿದ್ದರು.

'ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಇತ್ತೀಚೆಗಷ್ಟೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಿದೆ. ಹೊಸದಾಗಿ ಮತದಾರರ ಚೀಟಿಯನ್ನು ನೀಡಿದೆ. ಅದರಲ್ಲಿ ಮತದಾರರ ಈಗಿನ ಚಿತ್ರಗಳನ್ನು ಮುದ್ರಿಸಲಾಗಿದೆ. ಮತದಾರರ ಗುರುತು ಪತ್ತೆ ಮಾಡುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಬಿಜೆಪಿ ಈ ವಿಷಯದಲ್ಲಿ ತನ್ನ ಗೋಪ್ಯಕಾರ್ಯಸೂಚಿ ನುಸುಳಿಸಲು ಯತ್ನಿಸುತ್ತಿದೆ' ಎಂದು ಆರ್‌ಜೆಡಿಯ ಅಭಯ್‌ ಕುಶ್ವಾಹ ಆರೋಪಿಸಿದರು.

'ದೀಪಾವಳಿ ಬಳಿಕ ಬರುವ ಛತ್‌ ಹಬ್ಬದ ನಂತರ ಚುನಾವಣೆ ನಡೆಸಲು ವೇಳಾಪಟ್ಟಿ ಸಿದ್ಧಪಡಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದಾಗಿ' ಅವರು ಸುದ್ದಿಗಾರರಿಗೆ ವಿವರಿಸಿದರು.

ಲೋಕಜನಶಕ್ತಿ ಪಕ್ಷ (ರಾಮ ವಿಲಾಸ್‌) ಮತ್ತು ಸಿಪಿಐ (ಎಂಎಲ್‌) ಪಕ್ಷಗಳ ನಿಯೋಗ ಸಹ ಎರಡಕ್ಕಿಂತ ಹೆಚ್ಚು ಹಂತಗಳಲ್ಲಿ ಚುನಾವಣೆ ನಡೆಸುವುದು ಬೇಡ ಎಂದು ಆಯೋಗಕ್ಕೆ ತಿಳಿಸಿದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries