ತಿರುವನಂತಪುರಂ: ನಟಿ ಉರ್ವಶಿ ಅವರನ್ನು ಕೇರಳ ಸಾಂಸ್ಕೃತಿಕ ವೇದಿಕೆಯ 'ಸತ್ಯನ್ ಚಲನಚಿತ್ರ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ. 40 ವರ್ಷಗಳಿಗೂ ಹೆಚ್ಚು ಕಾಲ ಚಲನಚಿತ್ರಗಳಲ್ಲಿ ನಟಿಸುತ್ತಿರುವ ಉರ್ವಶಿ ಅವರನ್ನು ಮಲಯಾಳಂ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
50,000 ರೂ. ನಗದು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ ಶಿಲ್ಪವನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಅಮರ ನಟ ಸತ್ಯನ್ ಅವರ ಜನ್ಮ ದಿನಾಚರಣೆಯಾದ ನವೆಂಬರ್ 9 ರಂದು ಟ್ಯಾಗೋರ್ ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕೇರಳ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಜಾನ್ ಮನೋಹರ್ ಮತ್ತು ಪ್ರಧಾನ ಕಾರ್ಯದರ್ಶಿ ರಾಬರ್ಟ್ ಫ್ರಾನ್ಸಿಸ್ ಘೋಷಿಸಿದರು.
ಖ್ಯಾತ ಚಲನಚಿತ್ರ ನಿರ್ದೇಶಕರಾದ ಪಿ.ಟಿ. ಕುಂಜು ಮುಹಮ್ಮದ್, ಶರತ್ ಮತ್ತು ಕಲಾಧರನ್ ಅವರನ್ನೊಳಗೊಂಡ ತೀರ್ಪುಗಾರರು ಉರ್ವಶಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಉರ್ವಶಿ ತಮ್ಮ ನಾಲ್ಕು ದಶಕಗಳ ನಟನಾ ವೃತ್ತಿಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2005 ರ ಚಲನಚಿತ್ರ 'ಅಚುವಿಂತೆ ಅಮ್ಮ' ಮತ್ತು 2024 ರ ಚಲನಚಿತ್ರ 'ಉಲ್ಲೋಜುಕ್ಕು'ದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೆÇೀಷಕ ನಟಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು 1989, 1990, 1991 ಮತ್ತು 1992 ರಲ್ಲಿ ಸತತವಾಗಿ ಅತ್ಯುತ್ತಮ ನಟಿಗಾಗಿ ಕೇರಳ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮೋಹನ್ ಲಾಲ್, ಮಮ್ಮುಟ್ಟಿ, ಸುರೇಶ್ ಗೋಪಿ, ಜಯರಾಮ್, ದಿಲೀಪ್, ಇಂದ್ರನ್ಸ್, ಇಂದ್ರಜಿತ್, ಕೆಪಿಎಸಿ ಲಲಿತಾ, ಸುಕುಮಾರಿ, ಕಾವ್ಯಾ ಮಾಧವನ್, ಅಪರ್ಣಾ ಬಾಲಮುರಳಿ ಮುಂತಾದವರು ಈ ಹಿಂದೆ ಈ ಪ್ರಶಸ್ತಿ ಪಡೆದಿದ್ದಾರೆ.






