ಝಾಲಾವಾಡ: ಕೇಂದ್ರ ಮತ್ತು ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳಿಂದ ಹಣವನ್ನು ವಂಚಿಸುತ್ತಿತ್ತು ಎನ್ನಲಾಗಿರುವ ಬೃಹತ್ ಅಂತರರಾಜ್ಯ ಸೈಬರ್ ಅಪರಾಧ ಜಾಲವನ್ನು ಭೇದಿಸಿರುವುದಾಗಿ ಝಾಲಾವಾಡ ಪೋಲಿಸರು ತಿಳಿಸಿದ್ದಾರೆ.
ಆಪರೇಷನ್ ಶಟರ್‌ಡೌನ್‌ನ ಅಡಿ ಪೋಲಿಸರು ಪಿಎಂ ಕಿಸಾನ ಸಮ್ಮಾನ್ ನಿಧಿ, ಸಾಮಾಜಿಕ ಭದ್ರತಾ ಪಿಂಚಣಿಯಂತಹ ಯೋಜನೆಗಳು ಮತ್ತು ವಿವಿಧ ಪರಿಹಾರ ಕಾರ್ಯಕ್ರಮಗಳಡಿ ರೈತರು, ಪಿಂಚಣಿದಾರರು ಮತ್ತ ಕಡಿಮೆ ಆದಾಯದ ಫಲಾನುಭವಿಗಳಿಗೆ ಮೀಸಲಾಗಿದ್ದ ಹಣವನ್ನು ನಕಲಿ ಹಕ್ಕು ಕೋರಿಕೆಗಳ ಮೂಲಕ ವಂಚಿಸಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ.
ಝಾಲಾವಾಡನಿಂದ ಪಡೆದಿದ್ದ ವೈಯಕ್ತಿಕ ದತ್ತಾಂಶಗಳೊಂದಿಗೆ ಜೋಧಪುರ, ಕೋಟಾ, ಬುಂಡಿ ಮತ್ತು ದೌಸಾಗಳಾದ್ಯಂತ ನಕಲಿ ಗುರುತುಗಳು ಮತ್ತು ಖಾತೆಗಳನ್ನು ಬಳಿಸಿ ಹಣವನ್ನು ಹಿಂಪಡೆಯಲಾಗಿದೆ ಎಂದು ಹೇಳಲಾಗಿದೆ.
ವಂಚಕ ಜಾಲದ ರೂವಾರಿ ಆರೋಪಿ ದೌಸಾದ ಬಂಡಿಕುಯಿ ನಿವಾಸಿ ರಾಮಾವತಾರ ಸೈನಿ ಸೇರಿದಂತೆ 30 ಆರೋಪಿಗಳನ್ನು ಬಂಧಿಸಿರುವ ಪೋಲಿಸರು 52 ಲಕ್ಷ ರೂ.ನಗದು, ಐಷಾರಾಮಿ ವಾಹನಗಳು, 35 ಕಂಪ್ಯೂಟರ್‌ಗಳು, ಬಯೊಮೆಟ್ರಿಕ್ ಸಾಧನಗಳು, ನೂರಾರು ಸಿಮ್ ಕಾರ್ಡ್‌ಗಳು ಮತ್ತು 11,000ಕ್ಕೂ ಅಧಿಕ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 3 ಕೋಟಿ ರೂ.ಗೂ ಅಧಿಕವಾಗಿದೆ.
ಸಾರ್ವಜನಿಕರು ಪೋಲಿಸರೊಂದಿಗೆ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳಲು ಆರಂಭಿಸಲಾಗಿರುವ ಸಹಾಯವಾಣಿಯು ಜಾಲವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 2025,ಆ.8ರಂದು ಲಭಿಸಿದ್ದ ಸುಳಿವಿನ ಆಧಾರದಲ್ಲಿ ಸೈಬರ್ ವಂಚನೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ಪೋಲಿಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಬುಡಾನಿಯಾ ತಿಳಿಸಿದರು.
ಶಂಕಿತ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು ಮತ್ತು ವ್ಯಕ್ತಿಗಳ ಮೇಲೆ ವಾರಗಳ ಕಾಲ ಕಣ್ಗಾವಲು ಇರಿಸಿದ ಬಳಿಕ 70 ಪೋಲಿಸ್ ತಂಡಗಳು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 700 ಕಿ.ಮೀ.ವ್ಯಾಪ್ತಿಯಲ್ಲಿನ 30 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿಗಳನ್ನು ನಡೆಸಿದ್ದವು. ನೈಜ ಸಮಯದಲ್ಲಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದ್ದ ಝಾಲಾವಾಡ ಪೋಲಿಸ್ ಪ್ರಧಾನ ಕಚೇರಿಯ ಸೈಬರ್‌ನಿಯಂತ್ರಣ ಕೊಠಡಿಯು ತಂಡಗಳ ನಡುವೆ ಸಮನ್ವಯವನ್ನು ಖಚಿತಪಡಿಸಿತ್ತು ಮತ್ತು ಸಾಕ್ಷ್ಯನಾಶವನ್ನು ತಡೆದಿತ್ತು ಎಂದು ಬುಡಾನಿಯಾ ತಿಳಿಸಿದರು.
ವಂಚನೆಯ ಬೃಹತ್ ಪ್ರಮಾಣವನ್ನು ಪರಿಗಣಿಸಿ ಹಿರಿಯ ಪೋಲಿಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಬ್ಯಾಂಕ್ ಖಾತೆಗಳನ್ನು ವಿಶ್ಲೇಷಿಸಲು ಮತ್ತು ಹಣದ ಜಾಡನ್ನು ಪತ್ತೆ ಹಚ್ಚಲು ಎಸ್‌ಬಿಐ ಕೂಡ ನಾಲ್ವರು ಸದಸ್ಯರ ತಂಡವನ್ನು ನಿಯೋಜಿಸಿತ್ತು ಎಂದು ಬುಡಾನಿಯಾ ವಿವರಿಸಿದರು.




