ಗುವಾಹಟಿ: ಕಳೆದ ತಿಂಗಳು ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅಸ್ಸಾಂ ಗಾಯಕ ಜುಬೀನ್ ಗರ್ಗ್ ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಗರ್ಗ್ ಅವರ ಭದ್ರತೆಗೆ ನೇಮಕಗೊಂಡಿದ್ದ ಇಬ್ಬರು ಭದ್ರತಾ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗರ್ಗ್ ಭದ್ರತೆಗೆಂದು ಸರ್ಕಾರದಿಂದ ನೇಮಕಗೊಂಡಿದ್ದ ನಂದೇಶ್ವರ್ ಬೋರಾ ಮತ್ತು ಪರೇಶ್ ಬೈಶ್ಯ ಎನ್ನುವವರನ್ನು ವಿಚಾರಣೆ ನಡೆಸಿದ ಅಸ್ಸಾಂ ಪೊಲೀಸರು ಹುದ್ದೆಯಿಂದ ಅಮಾನತುಗೊಳಿಸಿದ್ದಾರೆ.
ಈ ಇಬ್ಬರ ಬ್ಯಾಂಕ್ ಖಾತೆಗಳ ಮೂಲಕ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗರ್ಗ್ ಅವರ ಸಾವಿನ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಈಶಾನ್ಯ ಭಾರತ ಉತ್ಸವದ ಆಯೋಜಕ ಶ್ಯಮಕನು ಮಹಾಂತ ಗರ್ಗ್ ಅವರ ಸೋದರ ಸಂಬಂಧಿ ಹಾಗೂ ಅಸ್ಸಾಂ ಪೊಲೀಸ್ ಡಿಎಸ್‌ಪಿ ಸಂದೀಪನ್ ಗರ್ಗ್, ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ, ಗಾಯಕ ಅಮೃತಪ್ರವ ಮಹಂತಾ ಸೇರಿ ಶೇಖರ ಜ್ಯೋತಿ ಗೋಸ್ವಾಮಿ ಎನ್ನುವವರನ್ನು ಬಂಧಿಸಿದ್ದಾರೆ.
ಸೆ.19ರಂದು ಸಿಂಗಪುರಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಸ್ಕೂಬ್ ಡೈವಿಂಗ್ ಮಾಡುವಾಗ ಗರ್ಗ್ ಮೃತಪಟ್ಟಿದ್ದರು. ಗರ್ಗ್ ಸಾವಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆ, ಅಸ್ಸಾಂ ಸರ್ಕಾರ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿತ್ತು.




