ನವದೆಹಲಿ: ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಹಳೆ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಗೆ ತೆರಳಿ ಸಿಹಿ ತಿಂಡಿ ತಯಾರಿಸಿದ್ದಾರೆ.
ಈ ಕುರಿತ ವಿಡಿಯೊವನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
'ಹಳೆಯ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಯಲ್ಲಿ ಇಮಾರ್ತಿ(ಜಿಲೇಬಿ) ಮತ್ತು ಬೇಸನ್ ಲಡ್ಡು ತಯಾರಿಸಲು ಪ್ರಯತ್ನಿಸಿದೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ಸಿಹಿತಿಂಡಿಗಳನ್ನು ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದರಲ್ಲಿ ಸಾಕಷ್ಟು ಶ್ರಮ ಮತ್ತು ಪ್ರತಿಭೆ ಇರುತ್ತದೆ' ಎಂದು ಗಾಂಧಿ ಹೇಳಿದ್ದಾರೆ.
ಈ ವೇಳೆ ಅಂಗಡಿ ಮಾಲೀಕ ಮತ್ತು ಅಲ್ಲಿನ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬೇಕರಿ ಇತಿಹಾಸವನ್ನು ವಿವರಿಸುವ ವೇಳೆ ಅಂಗಡಿ ಮಾಲೀಕ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಿಗೆ ಸಿಹಿ ತಿಂಡಿ ಪೂರೈಸಿರುವುದಾಗಿ ತಿಳಿಸಿದ್ದಾರೆ. 'ನಿಮ್ಮ(ರಾಹುಲ್) ಮದುವೆಗೆ ಸಿಹಿತಿಂಡಿ ಪೂರೈಸಲು ಕಾಯುತ್ತಿದ್ದೇನೆ' ಎಂದು ಅವರು ಹೇಳಿದಾಗ ರಾಹುಲ್ ಮುಗುಳ್ನಕ್ಕಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ದೀಪಾವಳಿಯ ಶುಭಾಶಯ ತಿಳಿಸಿರುವ ಅವರು, 'ಭಾರತವು ಸಂತೋಷದ ದೀಪಗಳಿಂದ ಬೆಳಗಲಿ. ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಬೆಳಕು ಪ್ರತಿ ಮನೆಯಲ್ಲೂ ಹರಡಲಿ' ಎಂದು ಹೇಳಿದ್ದಾರೆ.




