HEALTH TIPS

ಶಬರಿಮಲೆ ಪ್ರಕರಣ| ನನ್ನ ಪಾತ್ರ ಇಲ್ಲ, ತನಿಖೆಗೆ ಸಹಕರಿಸುವೆ: ಬಳ್ಳಾರಿಯ ಗೋವರ್ಧನ್‌

 ಬಳ್ಳಾರಿ: 'ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದು ನಿಜ. ತನಿಖೆಗೆ ಎಲ್ಲ ಸಹಕಾರ ನೀಡುತ್ತಿದ್ದೇನೆ' ಎಂದು ಬಳ್ಳಾರಿಯ ರೊದ್ದಂ ಜುವೆಲ್ಸ್‌ ಮಾಲೀಕ ಗೋವರ್ಧನ್‌ ಹೇಳಿದ್ದಾರೆ.

ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಳ್ಳಾರಿಗೆ ಬಂದಿದ್ದ ಕೇರಳ ಎಸ್‌ಐಟಿ ತಂಡ, ರೊದ್ದಂ ಜುವೆಲ್ಸ್‌ ಮಾಲೀಕರ ಬಳಿ ದಾಖಲೆಗಳನ್ನು ಪರಿಶೀಲಿಸಿದ್ದರು. 


ಈ ಕುರಿತು ಶನಿವಾರ 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಗೋವರ್ಧನ್‌, 'ಎಸ್‌ಐಟಿ ಅಧಿಕಾರಿಗಳು ಒಮ್ಮೆ ತಿರುವನಂತಪುರಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಸದ್ಯ ಬಳ್ಳಾರಿಗೆ ಬಂದು ದಾಖಲೆಗಳ ಪರಿಶೀಲಿಸಿದ್ದಾರೆ. ಮಾಧ್ಯಮಗಳೊಂದಿಗೆ ವಿಚಾರ ಹಂಚಿಕೊಳ್ಳಬಾರದು ಎಂದು ತಾಕೀತು ಮಾಡಿದ್ದು, ಹೆಚ್ಚು ಮಾತನಾಡುವುದಿಲ್ಲ' ಎಂದರು.

'ಸತತ 35 ವರ್ಷಗಳಿಂದಲೂ ನಾನು ಶಬರಿಮಲೆಯನ್ನು ಆರಾಧಿಸುತ್ತಿದ್ದೇನೆ. ಅಲ್ಲಿ ಕನ್ನಡ ಮಾತನಾಡುತ್ತಿದ್ದ ಉನ್ನಿಕೃಷ್ಣನ್‌ ನನಗೆ ಪರಿಚಯವಾಗಿದ್ದರು. 2019ರಲ್ಲಿ ಮುಖ್ಯ ದೇಗುಲದ ಬಾಗಿಲು ಮತ್ತು ಇತರೆ ವಸ್ತುಗಳನ್ನು ಮಾಡಿಕೊಡುವಂತೆ ಮನವಿ ಮಾಡಿದ್ದರು. ನಾನು ಅದನ್ನು ದೇಣಿಗೆಯಾಗಿ ಮಾಡಿಕೊಟ್ಟಿದ್ದೇನೆ. ಆದರೆ, ಅದನ್ನು ಉನ್ನಿಕೃಷ್ಣನ್‌ ಹೆಸರಿನಲ್ಲಿ ನೀಡಿದ್ದೇನೆ' ಎಂದು ಹೇಳಿದರು.

'ದೇಗುಲಕ್ಕೆ ದ್ವಾರಪಾಲಕರನ್ನು ಮಾಡಿಕೊಡುವಂತೆ ಮತ್ತೆ ನನಗೆ ಕೇಳಿಕೊಳ್ಳಲಾಗಿತ್ತು. , ಅದು ನನ್ನಿಂದ ಸಾಧ್ಯವಾಗಿಲ್ಲ. ಚಿನ್ನ ಕಳ್ಳತನ ಪ್ರಕರಣ 2019ರಲ್ಲೇ ನಡೆದಿದೆ. ಹೀಗಾಗಿ ಆ ವರ್ಷದ ವ್ಯವಹಾರಗಳನ್ನು ಎಸ್‌ಐಟಿ ತನಿಖೆ ಮಾಡುತ್ತಿದೆ. ಆದ್ದರಿಂದ ನನ್ನನ್ನು ವಿಚಾರಣೆ ಮಾಡಲಾಗುತ್ತಿದೆ. ಉಳಿದಂತೆ ನನ್ನ ಪಾತ್ರ ಬೇರೆ ಏನೂ ಇಲ್ಲ' ಎಂದು ಸ್ಪಷ್ಟಪಡಿಸಿದರು.

ಕೇರಳ ಪೊಲೀಸರು ಬಳ್ಳಾರಿಗೆ ಬಂದರೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ, 'ನೋಟಿಸ್‌ ಕೊಡುವ ಸಲುವಾಗಿ ಮಾತ್ರ ಕೇರಳ ಪೊಲೀಸರು ಬಳ್ಳಾರಿಗೆ ಬಂದಿದ್ದಾರೆ. ಬಂಧನ ಪ್ರಕ್ರಿಯೆ ಮಾಡಿಲ್ಲ. ಹೀಗಾಗಿ ಅವರು ನಮ್ಮ ನೆರವು ಕೋರಿಲ್ಲ' ಎಂದು ತಿಳಿಸಿದರು.

ಭದ್ರತಾ ಕೋಣೆ ಪರಿಶೀಲನೆ

ಪತ್ತನಂತಿಟ್ಟ: ಶಬರಿಮಲೆ ದೇಗುಲದ ಮುಖ್ಯ ಭದ್ರಾಗಾರದಲ್ಲಿರುವ (ಸ್ಟ್ರಾಂಗ್‌ ರೂಂ) ಚಿನ್ನಾಭರಣ ಸೇರಿದಂತೆ ಎಲ್ಲ ಬೆಲೆಬಾಳುವ ವಸ್ತುಗಳ ಪರಿಶೀಲನೆ ಮತ್ತು ಪಟ್ಟಿ ಮಾಡಲು ಹೈಕೋರ್ಟ್‌ ಸೂಚನೆ ಮೇರೆಗೆ ನೇಮಕಗೊಂಡಿರುವ ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಶಂಕರನ್‌ ಅವರು ಶನಿವಾರ ಆರನ್ಮುಳ ಭದ್ರತಾ ಕೊಠಡಿಗೆ ಭೇಟಿ ನೀಡಿ, ಪರಿಶೀಲನೆ ಆರಂಭಿಸಿದ್ದಾರೆ.

ಈಗಾಗಲೇ ಶಂಕರನ್‌ ಅವರು ಶಬರಿಮಲೆ ದೇಗುಲದ ಆವರಣದಲ್ಲೇ ಇರುವ ಒಂದು ಭದ್ರಾಗಾರದ ಪರಿಶೀಲನೆ ಮುಗಿಸಿದ್ದಾರೆ. ಶಬರಿಮಲೆ ದೇಗುಲಕ್ಕೆ ಭಕ್ತರು ನೀಡಿರುವ ಅಮೂಲ್ಯವಾದ, ಬೆಲೆಬಾಳುವ ವಸ್ತುಗಳನ್ನು ಆರನ್ಮುಳದಲ್ಲಿ ಇಡಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ.

ಟಿಡಿಬಿ ಅಧಿಕಾರಿಗಳು, ಅಕ್ಕಸಾಲಿಗರ ಸಮ್ಮುಖದಲ್ಲಿ ಆಭರಣಗಳನ್ನು ಮತ್ತೊಂದು ಕೊಠಡಿಗೆ ಸ್ಥಳಾಂತರಿಸಿ ಅಲ್ಲಿ ಪಟ್ಟಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಹಲವು ದಿನಗಳನ್ನು ತಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries