ಕಾಸರಗೋಡು: ತಾಮರಶ್ಯೇರಿಯಲ್ಲಿ ಸರ್ಕಾರಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಪಿ.ಟಿ ವಿಪಿನ್ ಅವರ ತಲೆಗೆ ಕಡಿದು, ಕೊಲೆಗೆ ಯತ್ನಿಸಿದ ಪ್ರಕರಣ ಖಂಡಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಗುರುವಾರ ವೈದ್ಯರು ಪ್ರತಿಭಟನೆ ನಡೆಸಿದರು.
ಕೇರಳಸರ್ಕಾರಿ ವೈದ್ಯಾಧಿಕಾರಿಗಳ ಸಂಘಟನೆಎ(ಕೆಜಿಎಂಓಎ) ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನೇತೃತ್ವದಲ್ಲಿಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೆಜಿಎಂಓಎ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಡಾ. ಶಮೀಮಾ ತನ್ವೀರ್, ಕಾಸರಗೋಡು ಶಾಖಾ ಸಮಿತಿ ಅಧ್ಯಕ್ಷ ಡಾ. ಬಿ ನಾರಾಯಣ ನಾಯ್ಕ್, ಡಾ. ಜನಾರ್ದನ ನಾಯ್ಕ್, ಡಾ. ಜಮಾಲ್ ಅಹಮ್ಮದ್, ಡಾ. ಅನಂತರಾಮ್, ಡಾ. ಸಾರಿಕಾ, ಡಾ. ಶಮೀಮಾ, ಡಾ. ನಿಖಿಲ್, ಡಾ. ಜಿತೇಂದ್ರ, ಡಾ. ಬಿ.ಎ ಸಪ್ನಾ ಮೊದಲಾದವರು ಉಪಸ್ಥಿತರಿದ್ದರು.
ಅಮೀಬಿಕ್ ಮೆದುಳು ಜ್ವರದ ಹಿನ್ನೆಲೆಯಲ್ಲಿ ತಾಮರಶ್ಯೇರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಒಂಬತ್ತು ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿರುವುದಾಗಿ ಆರೋಪಿಸಿ, ಬಾಲಕನ ತಂದೆ, ವೈದ್ಯ ಡಾ. ಟಿ.ಪಿ ವಿಪಿನ್ ಅವರ ತಲೆಗೆ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದನು. ಅರೋಪಿ ವಿರುದ್ಧ ಹತ್ಯಾಯತ್ನ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡಿರುವ ಅಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.




