ಸಮಸ್ತಿಪುರ: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಬಿಜೆಪಿ ಆಂತರಿಕ ಸಮೀಕ್ಷಾ ವರದಿ, ಜಾತಿಸಮೀಕರಣ ಲೆಕ್ಕಾಚಾರ, ಅಭ್ಯರ್ಥಿಗಳ ಇತಿಹಾಸ, ಗೆಲ್ಲುವ ಸಾಧ್ಯತೆಗಳ ಕುರಿತು ವರದಿ ಪ್ರಧಾನಿ ಮೋದಿ ಕೈಸೇರಿದೆ. ಈ ವರದಿ ಬಳಿಕ ಬಿಜೆಪಿ ಬಿಹಾರ ಗೆಲುವಿಗೆ ಭಾರಿ ಪ್ರಯತ್ನ ಮಾಡುತ್ತಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಅಧಿಕಾರ ಹಿಡಿಯುವವರು ಯಾರು ಅನ್ನೋ ಭವಿಷ್ಯವನ್ನು ವೇದಿಕೆಯಲ್ಲೇ ಹೇಳಿದ್ದಾರೆ. ಭರ್ಜರಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವ ಮೋದಿ, ಬಿಹಾರದಲ್ಲಿ ನೀತಿಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ದಾಖಲಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಹಾರ ಯುವಜನತೆ ಮತಗಳ ಕುರತು ಮೋದಿ ಉಲ್ಲೇಖ
ಬಿಹಾರ ಚುನಾವಣೆ ಕುರಿತ ಆಂತರಿಕ ಸಮೀಕ್ಷಾ ವರದಿಗಳು, ಮಾಧ್ಯಮಗಳಲ್ಲಿನ ವರದಿಗಳು ಸೇರದಿಂತೆ ಹಲವು ವರದಿಗಳ ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಯುವ ಜನತೆ ಎನ್‌ಡಿಎ ಅಭಿವೃದ್ಧಿ ಆಡಳಿತದ ಪರವಾಗಿದ್ದಾರೆ. ಬಿಹಾರ ಜನತೆ ನವ ಭಾರತದ ಪರಿಕಲ್ಪನೆಗೆ ಒತ್ತು ನೀಡಿದ್ದಾರೆ. ಹೊಸ ವಿಕಾಸ, ಮೂಲಭೂತ ಸೌಕರ್ಯ, ಹೆಚ್ಚು ಕಂಪಿನಗಳು ಬಿಹಾರದಲ್ಲಿ ಆರಂಭ ಸೇರಿದಂತೆ ಹಲವು ರೀತಿಯಿಂದ ಎನ್‌ಡಿಎ ಬೆಂಬಲಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಬಿಹಾರ ಜನತೆ ಈ ಬಾರಿ ಎನ್‌ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ನೀಡುತ್ತಾರೆ. ಬಿಹಾರ ಜನತೆ 100 ವರ್ಷವಾದರೂ ಲಾಲು ಪ್ರಸಾದ್ ಯಾದವು ಹಾಗೂ ಕಾಂಗ್ರೆಸ್ ನಡೆಸಿದ ಜಂಗಲ್ ರಾಜ್ ಆಡಳಿತ ಮರೆಯುವುದಿಲ್ಲ. ಬಿಹಾರ ಜನತೆ ಅತೀ ಹೆಚ್ಚು ವಲಸೆ ಕಾರ್ಮಿಕರಾಗಿ ಹೋಗುತ್ತಿದ್ದರು. ಇದೀಗ ಬಿಹಾರ ಯುವಜನತೆಗೆ ಬಿಹಾರದಲ್ಲಿ ಉದ್ಯೋಗ ಸಿಗುತ್ತಿದೆ. ಹೊಸ ಹೊಸ ಕಂಪನಿಗಳು ಬಿಹಾರದಲ್ಲಿ ಉದ್ಯಮ ವಿಸ್ತರಿಸಲು ಭೂಮಿಕೆ ಸಿದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.
ತೇಜಸ್ವಿ ಯಾದವ್ ಇಂಡಿಯಾ ಮೈತ್ರಿಕೂಟದ ಸಿಎಂ ಅಭ್ಯರ್ಥಿ
ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಂದೆಡೆ ಆರ್‌ಜೆಡಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಅಖಾಡದಲ್ಲಿದೆ. ನಿತೀಶ್ ಕುಮಾರ್ ಕಳೆದ 20 ವರ್ಷಗಳಿಂದ ಬಿಹಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. ಹೇಗಾದರೂ ಮಾಡಿ ನಿತೀಶ್ ಕುಮಾರ್ ಆಡಳಿತ ಅಂತ್ಯಗೊಳಿಸಲು ಆರ್‌ಜೆಡಿ ಹಾಗೂ ಇಂಡಿಯಾ ಒಕ್ಕೂಟ ಭಾರಿ ಪ್ರಯತ್ನ ಪಡುತ್ತಿದೆ. ಹೀಗಾಗಿ ಈ ಬಾರಿಯ ಬಿಹಾರ ಚುನಾವಣೆ ಭಾರಿ ಕುತೂಹಲ ಪಡೆದಿದೆ. ನಿನ್ನೆ (ಅ.23) ಇಂಡಿಯಾ ಮೈತ್ರಿಕೂಟ ಮಹತ್ವದ ಸಭೆ ನಡೆಸಿ ಮುಖ್ಯಮಂತ್ರಿ ಅಬ್ಯರ್ಥಿ ಘೋಷಿಸಿದೆ. ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಬಿಹಾರದ ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದೇ ವೇಳೆ ಎನ್‌ಡಿಎಗೆ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ನಿತೀಶ್ ಕುಮಾರ್ ಬಿಂಬಿಸಲು ಬಿಜೆಪಿ ಹಿಂದೇಟು ಹಾಕಿದೆ. ನಿತೀಶ್ ಕುಮಾರ್‌ಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ. ಇಂಡಿಯಾ ಮೈತ್ರಿಕೂಟದ ನಿಲುವು ಸ್ಪಷ್ಟವಾಗಿದೆ. ಯುವ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದರು.
ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೇರಲು ಪ್ರಚಾರಗಳು, ಆಂದೋಲನಗಳು ಆರಂಭಗೊಂಡಿದೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಆರಂಭಿಸಿದ್ದಾರೆ. ಇತ್ತ ಇಂಡಿಯಾ ಮೈತ್ರಿಕೂಡ ಸಿಎಂ ಅಭ್ಯರ್ಥಿ ಘೋಷಿಸಿದ್ದರೂ, ಸೀಟು ಹಂಚಿಕೆಯಲ್ಲಿನ ಗೊಂದಲ ಮುಗಿದಿಲ್ಲ. ಚರ್ಚೆ, ವಾದಗಳು ಮುಂದುವರಿದಿದೆ. 5ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಸೀಟು ಹಂಚಿಕೆ ಇನ್ನು ಅಂತಿಮಗೊಂಡಿಲ್ಲ. ಇದು ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ ತಂದಿದೆ.




