ವಾಷಿಂಗ್ಟನ್: ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸುವ ತನ್ನ ಪ್ರಯತ್ನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವಿಗುಣಗೊಳಿಸುತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಎರಡನೇ ಸಭೆ ನಡೆಸುವುದಾಗಿ ಗುರುವಾರ ಘೋಷಿಸಿದ್ದಾರೆ. ಶುಕ್ರವಾರ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಅವರು ಸಭೆ ನಡೆಸಲಿದ್ದು, ಅದಕ್ಕೂ ಮುಂಚೆ ಈ ಹೇಳಿಕೆ ನೀಡಿದ್ದಾರೆ.
ಗುರುವಾರ ಪುಟಿನ್ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ ಸ್ವಲ್ಪ ಸಮಯದಲ್ಲೇ ಅವರು ಈ ಘೋಷಣೆ ಮಾಡಿದ್ದಾರೆ. ಸಭೆಯ ದಿನಾಂಕವನ್ನು ನಿಗದಿಪಡಿಸಿಲ್ಲವಾದರೂ, ಸಭೆಯು ಸುಮಾರು ಎರಡು ವಾರಗಳಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
'ಇಂದಿನ ಫೋನ್ ಕರೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ ಎಂದು ಭಾವಿಸಿದ್ದೇನೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಆಗಸ್ಟ್‌ನಲ್ಲಿ ಇಬ್ಬರೂ ನಾಯಕರು ಅಲಾಸ್ಕಾದಲ್ಲಿ ಭೇಟಿಯಾಗಿದ್ದರಾದರೂ, ಸಭೆಯು ರಾಜತಾಂತ್ರಿಕ ಪ್ರಗತಿ ಸಾಧಿಸಿರಲಿಲ್ಲ. ಈ ಸಭೆಯು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುತ್ತದೆ ಎಂದು ನಿರೀಕ್ಷಿಸಿದ್ದ ಟ್ರಂಪ್‌ಗೆ ಹತಾಶೆಯನ್ನುಂಟುಮಾಡಿತ್ತು.

