ನವದೆಹಲಿ: ಬಿಹಾರದಲ್ಲಿ ಕೈಗೊಂಡಿದ್ದ 'ಎಸ್‌ಐಆರ್' ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ 'ನುಸುಳುಕೋರರು' ಹಾಗೂ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ್ದ 'ಮತ ಕಳವು' ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
'ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರಕ್ಕೆ ಭೇಟಿ ನೀಡಿದಾಗಲೆಲ್ಲಾ ನುಸುಳುಕೋರರ ಕುರಿತು ಪ್ರಸ್ತಾಪಿಸುತ್ತಿದ್ದರು. ಬಿಹಾರದಲ್ಲಿ ದೊಡ್ಡ ಸಂಖ್ಯೆಯಲ್ಲಿ ನುಸುಳುಕೋರರಿದ್ದು, ಅವರು ಮತ ಚಲಾಯಿಸುತ್ತಾರೆ ಎಂದು ಮೋದಿ ಹಾಗೂ ಶಾ ಹೇಳಿದ್ದಾರಲ್ಲ' ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಸಿಇಸಿ ಉತ್ತರಿಸಲಿಲ್ಲ.
'ಎಸ್‌ಐಆರ್ ವೇಳೆ ಎಷ್ಟು ಜನ ನುಸುಳುಕೋರರು ಪತ್ತೆಯಾಗಿದ್ದಾರೆ' ಎಂಬ ಪ್ರಶ್ನೆಗೂ ಅವರು ಉತ್ತರಿಸಲಿಲ್ಲ.
'ಮತ ಕಳವು' ಕುರಿತು ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳ ಕುರಿತ ಮತ್ತೊಂದು ಪ್ರಶ್ನೆಗೂ ಸಿಇಸಿ ಪ್ರತಿಕ್ರಿಯೆ ನೀಡಲಿಲ್ಲ.
ಆದರೆ, 'ಮುಜಫ್ಫರಪುರದ ನಿರ್ದಿಷ್ಟ ಮತಗಟ್ಟೆಯೊಂದರ ಮತದಾರರ ಪಟ್ಟಿಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ 100ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಿರುವ ಕುರಿತು ತನಿಖೆ ನಡೆಸಬೇಕು' ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಗುಂಜ್ಯಾಲ್ ಅವರಿಗೆ ಸೂಚಿಸಿದರು.
'ಅನೇಕ ಮತದಾರರಿಗೆ ಮನೆ ಇಲ್ಲ. ಇಂಥ ಸಂದರ್ಭಗಳಲ್ಲಿ, ನೆರೆ ಮನೆಯ ಸಂಖ್ಯೆಯನ್ನು ಇಂತಹ ಮತದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ, ಒಂದು ಮನೆಯಲ್ಲಿ ಅನೇಕ ಮತದಾರರು ಕಂಡುಬರುವ ಸಾಧ್ಯತೆ ಹೆಚ್ಚು' ಎಂದು ಅವರು ಕಾಂಗ್ರೆಸ್ ಪಕ್ಷದ ನಿಯೋಗ ಎತ್ತಿದ್ದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದರು.
'ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ತೃಪ್ತಿ ತಂದಿದೆ. ಮತದಾರರ ಪಟ್ಟಿಯ 'ಶುದ್ಧೀಕರಣ' ಕಾರ್ಯದಲ್ಲಿ 90 ಸಾವಿರಕ್ಕೂ ಅಧಿಕ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಶ್ಲಾಘನೀಯ ಕಾರ್ಯ ಮಾಡಿದ್ದಾರೆ' ಎಂದು ಜ್ಞಾನೇಶ್ ಕುಮಾರ್ ಹೇಳಿದರು. '22 ವರ್ಷಗಳ ಬಳಿಕ ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗಿದೆ. ನೈಜ ಮತದಾರರ ಸಂಖ್ಯೆಯನ್ನು 7.89 ಕೋಟಿಯಿಂದ 7.43 ಕೋಟಿಗೆ ಇಳಿಸಲು ಇದರಿಂದ ಸಾಧ್ಯವಾಗಿದೆ' ಎಂದು ಹೇಳಿದರು.'ಎಸ್‌ಐಆರ್ ತೃಪ್ತಿ ತಂದಿದೆ'




