HEALTH TIPS

ಹೆಣ್ಣುಮಗುವಿನ ರಕ್ಷಣೆ ಡಿಜಿಟಲ್ ಆಡಳಿತದ ಮುಖ್ಯ ಆದ್ಯತೆಯಾಗಬೇಕು: ಸಿಜೆಐ ಗವಾಯಿ

ನವದೆಹಲಿ: ಹೆಣ್ಣುಮಗುವನ್ನು ರಕ್ಷಿಸುವುದು ಡಿಜಿಟಲ್ ಆಡಳಿತದ ಪ್ರಮುಖ ಆದ್ಯತೆಯಾಗಿರಬೇಕು ಎಂದು ಶನಿವಾರ ಇಲ್ಲಿ ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ.ಆರ್.ಗವಾಯಿ ಅವರು, ಇಂದು ಹೆಣ್ಣುಮಗುವನ್ನು ರಕ್ಷಿಸುವುದು ಎಂದರೆ ತರಗತಿ ಕೋಣೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ಮಾತ್ರವಲ್ಲ,ಅವಳು ಎದುರಿಸುವ ಪ್ರತಿ ಸನ್ನಿವೇಶದಲ್ಲಿಯೂ ಅವಳ ಸಂರಕ್ಷಣೆಯಾಗಿದೆ ಎಂದು ಒತ್ತಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಬಾಲನ್ಯಾಯ ಸಮಿತಿಯು ಆಯೋಜಿಸಿದ್ದ ಹೆಣ್ಣುಮಗುವಿನ ಸುರಕ್ಷತೆ ಕುರಿತು ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ಗವಾಯಿ, ಇಂದು ಯುವತಿಯರು ಎದುರಿಸುತ್ತಿರುವ ಬೆದರಿಕೆಗಳು ಭೌತಿಕ ಸ್ಥಳಗಳನ್ನು ಮೀರಿ ವಿಶಾಲವಾದ ಮತ್ತು ಹೆಚ್ಚಾಗಿ ಅನಿಯಂತ್ರಿತ ಡಿಜಿಟಲ್ ಲೋಕಕ್ಕೆ ವಿಸ್ತರಿಸಿವೆ ಎಂದು ಎಚ್ಚರಿಕೆ ನೀಡಿದರು.

ನವೀನತೆಯು ಪ್ರಗತಿಯನ್ನು ವ್ಯಾಖ್ಯಾನಿಸುವ ಈ ಯುಗದಲ್ಲಿ ತಂತ್ರಜ್ಞಾನವನ್ನು ಶೋಷಣೆಯ ಬದಲು ವಿಮೋಚನೆಗಾಗಿ ಸಾಧನವನ್ನಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ ಅವರು, ಹೆಣ್ಣುಮಗುವಿನ ರಕ್ಷಣೆ ಡಿಜಿಟಲ್ ಆಡಳಿತದ ಪ್ರಮುಖ ಆದ್ಯತೆಯಾಗಿರಬೇಕು ಎಂದು ಒತ್ತಿ ಹೇಳಿದರು. ಆನ್ಲೈನ್ ಲೈಂಗಿಕ ಶೋಷಣೆ,ಡಿಜಿಟಲ್ ಕಳ್ಳಸಾಗಾಣಿಕೆ ಮತ್ತು ಸೈಬರ್ ಕಿರುಕುಳ ಕುರಿತ ಕಾನೂನುಗಳನ್ನು ಪರಿಣಾಮಕಾರಿ ಅನುಷ್ಠಾನ,ಶಿಕ್ಷಣ ಮತ್ತು ಜಾಗ್ರತಿ ಉಪಕ್ರಮಗಳೊಂದಿಗೆ ಜೋಡಿಸಬೇಕು ಎಂದೂ ಅವರು ಹೇಳಿದರು.

ಡಿಜಿಟಲ್ ಕ್ರಾಂತಿಯು ಕಲಿಕೆ ಮತ್ತು ಅವಕಾಶಗಳ ಹೊಸ ಮಾರ್ಗವನ್ನು ತೆರೆದಿದೆಯಾದರೂ ಅದು ಯುವತಿಯರನ್ನು ಆನ್ಲೈನ್ ಕಿರುಕುಳ ಮತ್ತು ಸೈಬರ್ ಬೆದರಿಕೆಯಿಂದ ಹಿಡಿದು ವೈಯಕ್ತಿಕ ಮಾಹಿತಿಗಳ ದುರುಪಯೋಗ ಮತ್ತು ಡೀಪ್ ಫೇಕ್ ವ ವರೆಗೆ ಸುಲಭದ ಗುರಿಯನ್ನಾಗಿಸಿದೆ ಎಂದು ನ್ಯಾ.ಗವಾಯಿ ಹೇಳಿದರು.

ಹೆಣ್ಣುಮಗುವಿನ ಸಂರಕ್ಷಣೆ ಮತ್ತು ಸಬಲೀಕರಣ ಸಂವಿಧಾನದ ಪರಿರ್ತನಾತ್ಮಕ ದೃಷ್ಟಿಕೋನದ ತಿರುಳಾಗಿದೆ ಎಂದು ಒತ್ತಿ ಹೇಳಿದ ಅವರು,ಒಂದು ದೇಶವು ತನ್ನ ಅತ್ಯಂತ ದುರ್ಬಲ ವರ್ಗಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದು ಅದರ ಸಾಮೂಹಿಕ ಆತ್ಮಸಾಕ್ಷಿಯನ್ನು ಅಳೆದರೆ ಆ ದೇಶದ ಶಕ್ತಿ ಮತ್ತು ಭವಿಷ್ಯವು ಅದರ ಹೆಣ್ಣುಮಕ್ಕಳ ಯೋಗಕ್ಷೇಮ ಮತ್ತು ಸಬಲೀಕರಣದೊಂದಿಗೆ ಬೇರ್ಪಡಿಸಲಾಗದ ಸಂಬಂಧವನ್ನು ಹೊಂದಿರುತ್ತದೆ ಎಂದು ಹೇಳಿದರು. ಘನತೆಯನ್ನು ನಿರಾಕರಿಸಿದರೆ,ಧ್ವನಿಗಳನ್ನು ಮೌನವಾಗಿಸಿದರೆ ಅಥವಾ ಸಂದರ್ಭಗಳು ಕನಸುಗಳನ್ನು ನಿರ್ಬಂಧಿಸಿದರೆ ಅಲ್ಲಿ ಸುರಕ್ಷತೆಯಿರಲು ಸಾಧ್ಯವಿಲ್ಲ ಎಂದೂ ಅವರು ನುಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries