ಭೋಪಾಲ: AI ರಚಿತ ಮೀಮ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ್ದಕ್ಕೆ ಶಿಕ್ಷೆಯಾಗಿ ಯುವಕನೋರ್ವನನ್ನು ಇನ್ನೋರ್ವ ವ್ಯಕ್ತಿಯ ಪಾದಗಳನ್ನು ತೊಳೆದು ನೀರನ್ನು ಕುಡಿಯುವಂತೆ ಬಲವಂತಗೊಳಿಸಿದ್ದ ಆರೋಪದಲ್ಲಿ ಸ್ವಯಂಪ್ರೇರಿತವಾಗಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯಿಂದ ಮಧ್ಯಪ್ರದೇಶ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಮಂಗಳವಾರ ಹಿಂದೆ ಸರಿದಿದೆ.
ಪ್ರಕರಣವನ್ನು ಮುಖ್ಯ ನ್ಯಾಯಾಧೀಶರ(ಸಿಜೆ) ನೇತೃತ್ವದ ಪೀಠದ ಮುಂದೆ ಸಲ್ಲಿಸುವಂತೆ ಆದೇಶಿಸಿದ ನ್ಯಾಯಮೂರ್ತಿಗಳಾದ ವಿವೇಕ ಅಗರವಾಲ್ ಮತ್ತು ಎ.ಕೆ.ಸಿಂಗ್ ಅವರು, ನ್ಯಾ.ಅತುಲ್ ಶ್ರೀಧರನ್ ಅವರು ಆರಂಭದಲ್ಲಿ ವಿಚಾರಣೆ ನಡೆಸಿದ್ದ ಪ್ರಕರಣಗಳನ್ನು ಸಿಜೆ ನೇತೃತ್ವದ ಪೀಠವು ನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಹಿಂದೆ ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತ ವಿಚಾರಣೆಗಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ನ್ಯಾ.ಶ್ರೀಧರನ್ ನೇತೃತ್ವದ ಪೀಠವು ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್‌ಎಸ್ ಎ) ಹೇರುವಂತೆ ದಾಮೋಹ್ ಪೋಲಿಸರಿಗೆ ಮತ್ತು ಆಡಳಿತಕ್ಕೆ ನಿರ್ದೇಶನ ನೀಡಿತ್ತು.
ಐವರನ್ನು ಬಂಧಿಸಿ ಅವರ ವಿರುದ್ಧ ಎನ್‌ಎಸ್‌ಎ ಹೇರಲಾಗಿತ್ತು. ಪ್ರಕರಣದಲ್ಲಿ ಸಂತ್ರಸ್ತ ಯುವಕ ಒಬಿಸಿ ಸಮುದಾಯಕ್ಕೆ ಸೇರಿದ್ದರೆ ಪಾದಗಳನ್ನು ತೊಳೆಸಿಕೊಂಡ ವ್ಯಕ್ತಿ ಮೇಲ್ಜಾತಿಗೆ ಸೇರಿದವನಾಗಿದ್ದ.
ಆರೋಪಿ ಪರ ಹಾಜರಾಗಿದ್ದ ಹಿರಿಯ ವಕೀಲ ನಮನ್ ನಗ್ರತ್ ಅವರು ಎನ್‌ಎಸ್‌ಎ ಹೇರುವ ಹೈಕೋರ್ಟ್ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿದರು ಮತ್ತು ಆದೇಶವು ಔಪಚಾರಿಕವಾಗಿ ನ್ಯಾಯಾಲಯದ ವೆಬ್ಸೈಟ್ನಲ್ಲಿ ಔಪಚಾರಿಕವಾಗಿ ಅಪ್ಲೋಡ್ ಆಗದೆ ಎಸ್ಪಿ ಅದನ್ನು ಹೇಗೆ ಪಾಲಿಸಿದರು ಎಂದೂ ಕೇಳಿದರು. ಹಿಂದಿನ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಅವರು ಕೋರಿಕೊಂಡರು.
ಹೈಕೋರ್ಟ್ ಅವರ ಕೋರಿಕೆಯನ್ನು ನಿರಾಕರಿಸಿತಾದರೂ ಎನ್‌ಎಸ್‌ಎ ಜಾರಿಗೊಳಿಸಲು ತಾನು ನೆಚ್ಚಿಕೊಂಡಿದ್ದ ವಿಷಯವನ್ನು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ಎಸ್ಪಿಗೆ ಆದೇಶಿಸಿತು. ಆಪಾದಿತ ಘಟನೆಯ ವೀಡಿಯೊ ಕ್ಲಿಪ್ಗಳನ್ನು ಪ್ರಸಾರ ಮಾಡಿದ್ದ ಮೂರು ಯೂಟ್ಯೂಬ್ ಚಾನೆಲ್ಗಳಿಗೆ ನೋಟಿಸ್ ಗಳನ್ನು ಹೊರಡಿಸಿದ ಪೀಠವು,ವಿಷಯದ ನಿಖರತೆಯನ್ನು ಖಚಿತಪಡಿಸಿಕೊಂಡಿದ್ದು ಹೇಗೆ ಎಂದು ಅವುಗಳನ್ನು ಪ್ರಶ್ನಿಸಿದೆ.
ಸತಾರಿಯಾ ಗ್ರಾಮದ ಸರಪಂಚ ಮತ್ತು ಪಂಚಾಯತ್ ಕಾರ್ಯದರ್ಶಿ ಕರೆದಿದ್ದ ಸಭೆಯಲ್ಲಿ ಈ ಅಪರಾಧ ಘಟಿಸಿದ್ದು,ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿತು.




