ಮಡಗಾಸ್ಕರ್: ಯುವಜನತೆಯ (ಜೆನ್ ಝೀ) ಪ್ರತಿಭಟನೆಗೆ ಮತ್ತೊಂದು ಸರ್ಕಾರ ಪತನಗೊಂಡಿದ್ದು, ಈ ಬಾರಿ ಆಫ್ರಿಕಾ ಖಂಡದ ಮಡಗಾಸ್ಕರ್ ಸರದಿ. ಮಡಗಾಸ್ಕರ್ ಅಧ್ಯಕ್ಷರು ದೇಶದಿಂದ ಪಲಾಯನ ಮಾಡಿದ್ದಾಗಿ ವಿರೋಧ ಪಕ್ಷಗಳು ಪ್ರಕಟಿಸಿವೆ. ಈ ಬೆಳವಣಿಗೆಯೊಂದಿಗೆ ಬಾಂಗ್ಲಾದೇಶ, ನೇಪಾಳದ ಬಳಿಕ ಮತ್ತೊಂದು ಸರ್ಕಾರ ಯುವ ಪ್ರತಿಭಟನೆ ಕಾರಣದಿಂದ ಪತನಗೊಂಡಂತಾಗಿದೆ.
ಸೇನೆಯ ಒಂದು ಬಣ ಪ್ರತಿಭಟನಾಕಾರರ ಜತೆ ಕೈಜೋಡಿಸಿದ ಬಳಿಕ ಮಡಗಾಸ್ಕರ್ ಅಧ್ಯಕ್ಷ ಆಂಡ್ರಿಯ್ ರಜೋಲಿನಾ ದೇಶ ತೊರೆದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿಟ್ನಿ ರಂಡ್ರಿನಸೊಲೊನಿಯಾಕೊ ರಾಯ್ಟರ್ಸ್ ಗೆ ತಿಳಿಸಿದ್ದಾರೆ.
ರಜೋಲಿನಾ ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಅಧ್ಯಕ್ಷರ ಚಲನ ವಲನಗಳ ಬಗ್ಗೆ ಅವರ ಕಚೇರಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸೋಮವಾರದ ನೇರ ಪ್ರಸಾರದ ಭಾಷಣದಲ್ಲಿ ರಜೋಲಿನಾ "ನನ್ನ ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಸುರಕ್ಷಿತ ಜಾಗದಲ್ಲಿ ಆಶ್ರಯ ಪಡೆದಿದ್ದೇನೆ" ಎಂದು ಪ್ರಕಟಿಸಿದ್ದಾರೆ.
ಮಡಗಾಸ್ಕರ್ ಆಡಳಿತ ಸೇನೆಯ ವಶಕ್ಕೆ:
ಪೂರ್ವ ಆಫ್ರಿಕಾದ ಮಡಗಾಸ್ಕರ್ ರಾಷ್ಟ್ರದ ಆಡಳಿತವನ್ನು ಸೇನೆ ನಿಯಂತ್ರಣಕ್ಕೆ ಪಡೆದಿರುವುದಾಗಿ ಸೇನಾಪಡೆಯ ಕ| ಮೈಕೆಲ್ ರ್ಯಾಂಡ್ರಿಯಾನಿರ್ನಿಯಾ ಮಂಗಳವಾರ ಘೋಷಿಸಿದ್ದಾರೆ.
ತಕ್ಷಣ ಸರಕಾರವನ್ನು ರಚಿಸಲು ಪ್ರಧಾನಿಯನ್ನು ನೇಮಿಸಲಾಗುವುದು ಮತ್ತು ಸೇನೆಯ ಅಧಿಕಾರಿಗಳನ್ನು ಒಳಗೊಂಡ ಆಡಳಿತ ಮಂಡಳಿಯನ್ನು ನೇಮಿಸಲಾಗುತ್ತದೆ ಎಂದವರು ಹೇಳಿದ್ದಾರೆ. ರಹಸ್ಯ ಸ್ಥಳದಲ್ಲಿರುವ ಅಧ್ಯಕ್ಷ ಆಂಡ್ರಿಯ್ ರಜೋಲಿನಾರನ್ನು ದೋಷಾರೋಪಣೆಗೆ ಒಳಪಡಿಸುವ ನಿರ್ಣಯವನ್ನು ಸಂಸತ್ತು ಅಂಗೀಕರಿಸಿದ ಬೆನ್ನಲ್ಲೇ ಸೇನೆಯ ಮುಖ್ಯಸ್ಥರ ಘೋಷಣೆ ಹೊರಬಿದ್ದಿದೆ.
ಇದಕ್ಕೂ ಮುನ್ನ, ರಾಷ್ಟ್ರದ ಸಂಸತ್ತನ್ನು ವಿಸರ್ಜಿಸುವುದಾಗಿ ಅಧ್ಯಕ್ಷ ಆಂಡ್ರಿಯ್ ರಾಜೊಲಿನಾ ಮಂಗಳವಾರ ರಹಸ್ಯ ಸ್ಥಳದಿಂದ ಘೋಷಿಸಿದ್ದರು. ತಮ್ಮ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಅಧ್ಯಕ್ಷರು `ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಸತ್ತನ್ನು ವಿಸರ್ಜಿಸುವುದಾಗಿ' ಫೇಸ್‍ಬುಕ್‍ನಲ್ಲಿ ಪ್ರಕಟಿಸಿದ್ದರು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಈ ಕ್ರಮ ಅನಿವಾರ್ಯ ಎಂದು ಮತ್ತೊಂದು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.
ಮಡಗಾಸ್ಕರ್‍ನಲ್ಲಿ ಕಳೆದ 2 ವಾರಗಳಿಂದ ಸರಕಾರದ ವಿರುದ್ಧ ಯುವಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಜೊಲಿನಾ `ರಹಸ್ಯ ಸ್ಥಳಕ್ಕೆ' ತೆರಳಿರುವುದಾಗಿ ಅಧ್ಯಕ್ಷರ ಕಚೇರಿ ಹೇಳಿದೆ.




