ಇಂಫಾಲ: ಮಣಿಪುರದ ಹಲವು ಜಿಲ್ಲೆಗಳಲ್ಲಿ ಸುಲಿಗೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್‌ಪೋಕ್ಪಿ ಮತ್ತು ಇಂಫಾಲ ಪಶ್ಚಿಮ ಜಿಲ್ಲೆಗಳಲ್ಲಿ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್‌ಪೋಕ್ಪಿ ಜಿಲ್ಲೆಯ ಕೋಟ್ಜಿಮ್‌ನಲ್ಲಿ ಎರಡು ಮ್ಯಾಗಜೀನ್, ಎರಡು ಬೋಲ್ಟ್ ಆಕ್ಷನ್ ರೈಫಲ್, ಎರಡು ಪುಲ್ ಮೆಕ್ಯಾನಿಸಂ ರೈಫಲ್, ಎರಡು ಸುಧಾರಿತ ಮಾರ್ಟರ್ ಮತ್ತು ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಫಾಲ ಪಶ್ಚಿಮ ಜಿಲ್ಲೆಯ ಕಾಂಗ್ಲಟೊಂಬಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಒಂದು ಸಬ್-ಮೆಷಿನ್ ಗನ್, ಒಂದು 303 ರೈಫಲ್, ಒಂದು 9 ಎಂಎಂ ಪಿಸ್ತೂಲ್, ಒಂದು 32 ಪಿಸ್ತೂಲ್, ಏಳು ಸ್ಥಳೀಯವಾಗಿ ತಯಾರಿಸಿದ ಬೋಲ್ಟ್ ಆಕ್ಷನ್ ರೈಫಲ್ ಸೇರಿದಂತೆ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.




