HEALTH TIPS

ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್ ಹೆಸರು!

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮುನ್ನ ಜನ ಸುರಾಜ್ ಪಕ್ಷದ ಸ್ಥಾಪಕ ಹಾಗೂ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಹೆಸರು ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡೂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಕಿಶೋರ್ ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಲೋಕಸಭಾ ಕ್ಷೇತ್ರದಡಿ ಬರುವ ಕಾರ್ಗಹರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ.ಅವರ ಪೂರ್ವಜರ ಊರಾದ ಕೋನಾರ್ ಗ್ರಾಮದ ಮಧ್ಯ ವಿದ್ಯಾಲಯವೇ ಅವರ ಮತಗಟ್ಟೆಯಾಗಿದೆ.

ಇದೇ ವೇಳೆ, ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿಯೂ ಅವರ ಹೆಸರು ಕಾಣಿಸಿಕೊಂಡಿದ್ದು,121, ಕಾಲಿಘಾಟ್ ರಸ್ತೆ ಎಂಬ ವಿಳಾಸವಿದೆ. ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಬಾನಿಪುರ ಕ್ಷೇತ್ರದಲ್ಲಿರುವ ತೃಣಮೂಲ ಕಾಂಗ್ರೆಸ್ ಕಚೇರಿಯ ವಿಳಾಸವಾಗಿದೆ. ಅವರ ಮತಗಟ್ಟೆ ಸೇಂಟ್ ಹೆಲೆನ್ ಶಾಲೆ, ಬಿ. ರಾಣಿಶಂಕರಿ ಲೇನ್‌ ಎಂದು ಗುರುತಿಸಲಾಗಿದೆ. 2021ರ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ಕಿಶೋರ್ ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು.

ಎರಡು ಕಡೆ ಮತದಾರರ ಪಟ್ಟಿಯಲ್ಲಿ ನೋಂದಣಿ ಆರೋಪದ ಕುರಿತು ಪ್ರಶಾಂತ್ ಕಿಶೋರ್ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

"ಪಶ್ಚಿಮ ಬಂಗಾಳ ಚುನಾವಣೆಯ ನಂತರ ಕಿಶೋರ್ ಬಿಹಾರದ ಕಾರ್ಗಹರ್ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ನಂತರ ಅವರು ಬಂಗಾಳದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಅಳಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ," ಎಂದು ಜನ ಸುರಾಜ್ ಪಕ್ಷದ ಹಿರಿಯ ನಾಯಕರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನಲ್ಲಿ ಮಾಹಿತಿ ನೀಡಿದರು.

ಜನ ಸುರಾಜ್ ಪಕ್ಷವು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆರಂಭದಲ್ಲಿ ಕಿಶೋರ್ ಕಾರ್ಗಹರ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ, ಬಳಿಕ ಅವರು ರಾಘೋಪುರ ಕ್ಷೇತ್ರದಿಂದ ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ವಿರುದ್ಧ ಸ್ಪರ್ಧಿಸುವ ಆಸಕ್ತಿ ತೋರಿಸಿದ್ದರು. ಆದರೆ ನಂತರ ಚುನಾವಣೆಯಿಂದ ಹಿಂದೆ ಸರಿದರು.

"ಪಕ್ಷದ ಒಟ್ಟಾರೆ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ನಾನು ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ. ಇದೀಗ ನನ್ನ ಗಮನ ಪಕ್ಷದ ಸಂಘಟನೆ ಬಲಪಡಿಸುವತ್ತ ಮತ್ತು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವತ್ತ ಕೇಂದ್ರೀಕೃತವಾಗಿದೆ," ಎಂದು ಕಿಶೋರ್ ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಎರಡು ಕಡೆ ನೋಂದಣಿ ವಿಷಯ ಹೊಸದು ಅಲ್ಲ. ಹಿಂದೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಹಾಗೂ ಪ್ರಸ್ತುತ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಹೆಸರುಗಳು ಪಾಟ್ನಾ ಹಾಗೂ ಅವರ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ದಾಖಲಾಗಿದ್ದು ವರದಿಯಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries