HEALTH TIPS

ಬಿಹಾರ ಚುನಾವಣೆ: ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

ನವದೆಹಲಿ: ನವೆಂಬರ್‌ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿರುವ ಬಿಹಾರದಲ್ಲಿ ರಾಜಕೀಯ ಚಟುವಟಿಕೆ ಗುರುವಾರ ತೀವ್ರಗೊಂಡಿತು.

ಆಡಳಿತಾರೂಢ ಎನ್‌ಡಿಎ ವಿರುದ್ಧ ಕಾಂಗ್ರೆಸ್‌ ಆರೋಪ ಪಟ್ಟಿ ಬಿಡುಗಡೆ ಮಾಡಿತು. ಯುವಜನರಿಗೆ ಸರ್ಕಾರಿ ಉದ್ಯೋಗ ನೀಡುವ ಹೊಸ ಘೋಷಣೆಯನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಾಡಿದರು.

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್‌ ಪಕ್ಷವು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತು.

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಲಿದೆ. ಪ್ರಮುಖ ಬಣಗಳಾದ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳು ಸೀಟು ಹಂಚಿಕೆಯ ಕಸರತ್ತಿನಲ್ಲಿ ತೊಡಗಿವೆ. ಇದೇ ವೇಳೆ, ಜನ ಸುರಾಜ್‌ ಪಕ್ಷವು 51 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತು. ಮೀಸಲು ಕ್ಷೇತ್ರದಲ್ಲಿ ತೃತೀಯ ಲಿಂಗಿಯೊಬ್ಬರಿಗೆ ಪಕ್ಷ ಟಿಕೆಟ್‌ ನೀಡಿದೆ. ಪಟ್ಟಿ ಬಿಡುಗಡೆ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್, 'ಮುಂದಿನ ಪಟ್ಟಿ ಎರಡು-ಮೂರು ದಿನಗಳಲ್ಲಿ ಬಿಡುಗಡೆ ಆಗಲಿದೆ' ಎಂದರು. ಆದರೆ, ಪ್ರಶಾಂತ್‌ ಕಿಶೋರ್ ಕಣಕ್ಕಿಳಿಯಲಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಲಿಲ್ಲ.

ಒಂದು ವೇಳೆ ಸ್ಪರ್ಧಿಸುವ ಮನಸ್ಸು ಮಾಡಿದರೆ ಕಾರ್ಗಹರ್‌ನಿಂದ (ಅವರ ಹುಟ್ಟಿದ ಊರು) ಕಣಕ್ಕಿಳಿಯುವೆ ಎಂದು ಪ್ರಶಾಂತ್‌ ಕಿಶೋರ್ ಈ ಹಿಂದೆ ಹೇಳಿದ್ದರು. ಈ ಕ್ಷೇತ್ರದಲ್ಲಿ ಭೋಜ್‌ಪುರಿ ಗಾಯಕ ರಿತೇಶ್‌ ಪಾಂಡೆ ಅವರನ್ನು ಹುರಿಯಾಳುವನ್ನಾಗಿ ಮಾಡಿದೆ.

ತೇಜಸ್ವಿ ಭರವಸೆ:

ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, '20 ತಿಂಗಳೊಳಗೆ ಪ್ರತಿ ಮನೆಗೂ ಸರ್ಕಾರಿ ಉದ್ಯೋಗವಿರುವ ಸದಸ್ಯರನ್ನು ಹೊಂದುವಂತೆ ಖಚಿತಪಡಿಸಿಕೊಳ್ಳಲು ನಾವು 20 ದಿನಗಳಲ್ಲಿ ಒಂದು ಕಾಯ್ದೆ ತರುತ್ತೇವೆ' ಎಂದು ತೇಜಸ್ವಿ ಯಾದವ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ತೇಜಸ್ವಿ ಅವರು ಈ ಹಿಂದಿನ ಚುನಾವಣೆ ವೇಳೆ ಭರವಸೆ ನೀಡಿದ್ದರು. 'ಉಪಮುಖ್ಯಮಂತ್ರಿಯಾಗಿ ತಮ್ಮ ಅಲ್ಪಾವಧಿಯಲ್ಲಿ, ಅರ್ಧದಷ್ಟು ಭರವಸೆಗಳನ್ನು ಪೂರೈಸಲು ಸಾಧ್ಯವಾಯಿತು' ಎಂದು ಯಾದವ್ ಹೇಳಿದರು.

ಕಾಂಗ್ರೆಸ್‌ ಚಾರ್ಜ್‌ಶೀಟ್‌:

ಏತನ್ಮಧ್ಯೆ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಜೈರಾಮ್ ರಮೇಶ್, ಅಶೋಕ್ ಗೆಹಲೋತ್‌, ಭೂಪೇಶ್ ಸಿಂಗ್ ಬಘೇಲ್ ಮತ್ತು ಅಧೀರ್ ರಂಜನ್ ಚೌಧರಿ ಅವರು 42 ಪುಟಗಳ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿ ಎನ್‌ಡಿಎ ಬಿಹಾರಕ್ಕೆ ವಿನಾಶ ತಂದಿದೆ ಎಂದು ಆರೋಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries