ನವದೆಹಲಿ: ಈ ವರ್ಷದ ದೀಪಾವಳಿ ಸೀಸನ್ನ ಮಾರಾಟದಲ್ಲಿ ಹೊಸ ದಾಖಲೆ ಸ್ಥಾಪನೆಯಾಗಿದೆ. ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ನೀಡಿರುವ ಮಾಹಿತಿ ಪ್ರಕಾರ 2025ರ ದೀಪಾವಳಿ ಹಬ್ಬದ ಸೇಲ್ಸ್ನಲ್ಲಿ 6.05 ಲಕ್ಷ ಕೋಟಿ ರೂನಷ್ಟು ವಹಿವಾಟು ನಡೆದಿದೆ.
ಇದರಲ್ಲಿ ಸರಕುಗಳ ವ್ಯಾಪಾರವೇ 5.40 ಲಕ್ಷ ಕೋಟಿ ರೂ ಆಗಿದೆ. ಸರ್ವಿಸಸ್ ಟ್ರೇಡ್ 65,000 ಕೋಟಿ ರೂ ಆಗಿರುವುದು ತಿಳಿದುಬಂದಿದೆ.
ಯಾವುದೇ ವರ್ಷದಲ್ಲಿ ದೀಪಾವಳಿ ಸೀಸನ್ನಲ್ಲಿ 6 ಲಕ್ಷ ಕೋಟಿ ರೂ ವ್ಯಾಪಾರ ಆಗಿರಲಿಲ್ಲ. ಆ ಮಟ್ಟಿಗೆ ಹೊಸ ದಾಖಲೆ ಸ್ಥಾಪನೆಯಾಗಿದೆ. ಕಳೆದ ವರ್ಷದ (2024) ದೀಪಾವಳಿ ಸೀಸನ್ನಲ್ಲಿ 4.25 ಲಕ್ಷ ಕೋಟಿ ರೂನಷ್ಟು ಮಾರಾಟ ಆಗಿತ್ತು. ಈ ವರ್ಷ ಸೇಲ್ಸ್ ಶೇ. 25ರಷ್ಟು ಹೆಚ್ಚಿದೆ.
ಚಿನ್ನಾಭರಣಗಳು ಭರ್ಜರಿ ಮಾರಾಟ
ಈ ದೀಪಾವಳಿ ಸೇಲ್ಸ್ನಲ್ಲಿ ದಿನಸಿ ವಸ್ತುಗಳು ಒಳಗೊಂಡಂತೆ ಎಫ್ಎಂಸಿಜಿಯ ಪಾಲು ಶೇ. 12ರಷ್ಟಿದೆ. ಚಿನ್ನ ಹಾಗೂ ಆಭರಣಗಳ ಮಾರಾಟದ ಪಾಲು ಶೇ. 10ರಷ್ಟಿದೆ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್, ಕನ್ಸೂಮರ್ ಡುರಬಲ್, ಸಿದ್ಧ ಉಡುಪು ಹಾಗೂ ಉಡುಗೊರೆ ವಸ್ತುಗಳ ಮಾರಾಟ ಕೂಡ ಗಣನೀಯವಾಗಿ ಹೆಚ್ಚಿನ ಮಟ್ಟದಲ್ಲಿ ಇದೆ.
ಇನ್ನು, ಮನೆ ಅಲಂಕಾರ, ಪೀಠೋಪಕರಣ ಇತ್ಯಾದಿಗಳ ಮಾರಾಟ ಶೇ. 10ರಷ್ಟಿದೆ. ಸಿಹಿ ತಿಂಡಿಗಳು ಶೇ. 5, ಪೂಜಾ ವಸ್ತುಗಳು ಶೇ. 3, ಹಣ್ಣು ಶೇ. 4 ಮಾರಾಟ ಕಂಡಿವೆ ಎಂದು ಸಿಎಐಟಿ ಬಿಡುಗಡೆ ಮಾಡಿದ ರಿಸರ್ಚ್ ವರದಿಯಲ್ಲಿ ತಿಳಿಸಲಾಗಿದೆ.
ದೇಶಾದ್ಯಂತ ಇರುವ ವ್ಯಾಪಾರಿಗಳನ್ನು ಸಮೀಕ್ಷೆ ಮಾಡಿ ಈ ದತ್ತಾಂಶ ಬಿಡುಗಡೆ ಮಾಡಲಾಗಿದೆ. ಜಿಎಸ್ಟಿ ದರಗಳು ಇಳಿಕೆಗೊಂಡ ಪರಿಣಾಮವಾಗಿ ವ್ಯಾಪಾರ ಹೆಚ್ಚಾಗಿರಬಹುದು ಎಂದು ಶೇ. 72ರಷ್ಟು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ಸಿಎಐಟಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರ ಪ್ರಕಾರ, ಕಾರ್ಪೊರೇಟ್ ಮತ್ತು ಕೃಷಿ ಕ್ಷೇತ್ರದ್ದಲ್ಲದ 9 ಕೋಟಿ ಸಣ್ಣ ಉದ್ದಿಮೆಗಳು ಹಾಗೂ ಲಕ್ಷಾಂತರ ಉತ್ಪಾದನಾ ಘಟಕಗಳು ಭಾರತದ ಅಭಿವೃದ್ಧಿಗೆ ಪ್ರಮುಖ ಎಂಜಿನ್ ಆಗಿವೆ.




