HEALTH TIPS

ಹಮಾಸ್‌-ಇಸ್ರೇಲ್‌ ಸಹಮತ: ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ

ಕೈರೊ: ಗಾಜಾದಲ್ಲಿ ಮೊದಲ ಹಂತದ ಶಾಂತಿ ಸ್ಥಾಪನೆ ಯೋಜನೆ ಜಾರಿಗೆ ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರ ಸಂಘಟನೆ ಗುರುವಾರ ಒಪ್ಪಿಗೆ ಸೂಚಿಸಿವೆ.

ಶಾಂತಿ ಒಪ್ಪಂದದ ಪ್ರಕಾರ ಹಮಾಸ್‌ ತನ್ನ ಬಳಿಯಿರುವ ಉಳಿದ ಎಲ್ಲ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಿದ್ದು, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಿದೆ.

ಒಪ್ಪಂದದ ಭಾಗವಾಗಿ ಗಾಜಾದ ಕೆಲವು ಪ್ರದೇಶಗಳಿಂದ ಇಸ್ರೇಲ್‌ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಿದೆ.

ಗಾಜಾದಲ್ಲಿ ಯುದ್ಧ ಕೊನೆಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 20 ಅಂಶಗಳ ಯೋಜನೆಯನ್ನು ಮುಂದಿಟ್ಟಿದ್ದರು. ಶಾಂತಿ ಸ್ಥಾಪನೆ ಯೋಜನೆಯ ಮೊದಲ ಹಂತದ ಜಾರಿಗೆ ಈಜಿಪ್ಟ್‌ ರಾಜಧಾನಿ ಕೈರೊದ ಶರ್ಮ್‌ ಎಲ್‌ ಶೇಖ್‌ನಲ್ಲಿ ಇಸ್ರೇಲ್‌ ಮತ್ತು ಹಮಾಸ್‌ ನಿಯೋಗದ ನಡುವೆ ಮೂರು ದಿನಗಳಿಂದ ನಡೆದ ಮಾತುಕತೆ ಕೊನೆಗೂ ಫಲಪ್ರದವಾಗಿದೆ.

ಶಾಂತಿ ಯೋಜನೆ ಜಾರಿಗೆ ಎರಡೂ ಕಡೆಯವರು ಒಪ್ಪಿಕೊಂಡಿರುವುದಾಗಿ ಟ್ರಂಪ್‌ ಘೋಷಿಸಿದ್ದಾರೆ. 'ನಮ್ಮ ಶಾಂತಿ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಇಸ್ರೇಲ್ ಮತ್ತು ಹಮಾಸ್ ಸಹಮತ ವ್ಯಕ್ತಪಡಿಸಿವೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ' ಎಂದು ಅವರು 'ಟ್ರುತ್ ಸೋಷಿಯಲ್‌'ನಲ್ಲಿ ಬರೆದುಕೊಂಡಿದ್ದಾರೆ.

ಟ್ರಂಪ್‌ ಅವರ ಶಾಂತಿ ಯೋಜನೆಯ ಇತರ ಕೆಲವು ಅಂಶಗಳ ಜಾರಿ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಹಮಾಸ್‌ ಸದಸ್ಯರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಬೇಕು ಮತ್ತು ಗಾಜಾದ ಆಡಳಿತವನ್ನು ನೋಡಿಕೊಳ್ಳುವವರು ಯಾರು - ಮುಂತಾದ ಪ್ರಮುಖ ಆಂಶಗಳ ಬಗ್ಗೆ ಯಾವುದೇ ತೀರ್ಮಾನ ಹೊರಬಿದ್ದಿಲ್ಲ.

ಆದರೆ, ಶಾಂತಿ ಯೋಜನೆಯ ಮೊದಲ ಹಂತದ ಜಾರಿಗೆ ಸಹಮತ ಮೂಡಿರುವುದು ಎರಡು ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇಟ್ಟಿರುವ ಪ್ರಮುಖ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.

ಸಾವಿರಾರು ಪ್ಯಾಲೆಸ್ಟೀನಿಯನ್ನರನ್ನು ಬಲಿ ತೆಗೆದುಕೊಂಡಿರುವ, ಗಾಜಾದಲ್ಲಿ ಅಪಾರ ನಷ್ಟ ಮತ್ತು ಕ್ಷಾಮಕ್ಕೆ ಕಾರಣವಾಗಿರುವ ಹಾಗೂ ಪಶ್ಚಿಮ ಏಷ್ಯಾದ ಇತರ ಕಡೆಗಳಲ್ಲೂ ಸಂಘರ್ಷಕ್ಕೆ ನಾಂದಿ ಹಾಡಿದ ಯುದ್ಧ ಕೊನೆಗೊಂಡು ಶಾಂತಿ ಸ್ಥಾಪನೆಯಾಗುವ ಭರವಸೆ ಮೂಡಿದೆ.

ಸುಮಾರು 2,000 ಪ್ಯಾಲೆಸ್ಟೀನಿಯನ್ ಕೈದಿಗಳಿಗೆ ಬದಲಾಗಿ ಏಕಕಾಲದಲ್ಲಿ 20 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹಮಾಸ್‌ನ ಮೂಲವೊಂದು ತಿಳಿಸಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿರುವ 250 ಮಂದಿ ಹಾಗೂ ಯುದ್ಧ ಆರಂಭವಾದ ಬಳಿಕ ಇಸ್ರೇಲ್‌ ಬಂಧಿಸಿರುವ 1,700 ಪ್ಯಾಲೆಸ್ಟೀನಿಯರು ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದೆ.

ಒಪ್ಪಂದಕ್ಕೆ ಸಹಿ ಬಿದ್ದ 72 ಗಂಟೆಗಳ ಒಳಗೆ ವಿನಿಮಯ ಪ್ರಕ್ರಿಯೆ ನಡೆಯಲಿದೆ. 'ಒಪ್ಪಂದದ ಅನುಷ್ಠಾನಕ್ಕೆ ಸಂಪುಟ ಸಭೆ ಅನುಮೋದನೆ ದೊರೆತ ನಂತರವೇ 72 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗುತ್ತದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.

2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್ ನಡೆಸಿದ ದಾಳಿಯೊಂದಿಗೆ ಯುದ್ಧ ಆರಂಭಗೊಂಡಿತ್ತು. ಅದಕ್ಕೆ ಪ್ರತೀಕಾರವಾಗಿ ಗಾಜಾ ಮೇಲೆ ಇಸ್ರೇಲ್‌ ನಡೆಸಿದ ನಿರಂತರ ದಾಳಿಯಲ್ಲಿ 67 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಹಮಾಸ್‌ನ ಬಹುತೇಕ ಎಲ್ಲ ಪ್ರಮುಖ ನಾಯಕರನ್ನು ಇಸ್ರೇಲ್‌ ಹತ್ಯೆ ಮಾಡಿದೆ.

 ಟೆಲ್‌ ಅವೀವ್‌ನ 'ಹಾಸ್ಟೇಜ್‌ ಸ್ಕ್ವೇರ್‌' ಬಳಿ ಜನರು ಇಸ್ರೇಲ್‌ ಹಾಗೂ ಅಮೆರಿಕದ ಧ್ವಜಗಳೊಂದಿಗೆ ಹರ್ಷ ವ್ಯಕ್ತಪಡಿಸಿದರು -ಎಎಫ್‌ಪಿ ಚಿತ್ರ ಡೊನಾಲ್ಡ್‌ ಟ್ರಂಪ್ ಅಮೆರಿಕದ ಅಧ್ಯಕ್ಷಎಲ್ಲ ಒತ್ತೆಯಾಳುಗಳು ಸೋಮವಾರ ಬಿಡುಗಡೆ ಆಗಲಿದ್ದಾರೆ. ಗಾಜಾದ ಕೆಲವು ಪ್ರದೇಶಗಳಿಂದ ಇಸ್ರೇಲ್‌ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಿದೆ

ಪ್ರಮುಖ ಅಂಶಗಳು...

* ಒತ್ತೆಯಾಳುಗಳು ಬಿಡುಗಡೆಯಾಗಲಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಟೆಲ್‌ ಅವೀವ್‌ನ 'ಹಾಸ್ಟೇಜ್ ಸ್ಕ್ವೇರ್‌' ಬಳಿ ಸಂಭ್ರಮಿಸಿದ ಸಾವಿರಾರು ಮಂದಿ

* ಖಾನ್‌ ಯೂನಿಸ್‌ನ ನಾಸೆರ್‌ ಆಸ್ಪತ್ರೆ ಬಳಿ ಪ್ಯಾಲೆಸ್ಟೀನಿಯರಿಂದ ಸಂಭ್ರಮಾಚರಣೆ

* ಶಾಂತಿ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದ ಬಳಿಕವೂ ಗಾಜಾ ಮೇಲೆ ಮುಂದುವರಿದ ಇಸ್ರೇಲ್‌ ದಾಳಿ

* ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ ಕತಾರ್‌ ಈಜಿಪ್ಟ್‌ ಮತ್ತು ಟರ್ಕಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ಡೊನಾಲ್ಡ್‌ ಟ್ರಂಪ್

* ಇಸ್ರೇಲ್‌ ಬಿಡುಗಡೆಗೊಳಿಸಬೇಕಾದ ಕೈದಿಗಳ ಪಟ್ಟಿ ನೀಡಿದ ಹಮಾಸ್

* ಪಶ್ಚಿಮ ಏಷ್ಯಾದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವ ಆಶಯ ವ್ಯಕ್ತಪಡಿಸಿದ ವಿಶ್ವದ ವಿವಿಧ ದೇಶಗಳ ನಾಯಕರು

* ಕದನ ವಿರಾಮ ಜಾರಿಯಾದ ಬಳಿಕದ ಐದು ದಿನಗಳವರೆಗೆ ಪ್ರತಿದಿನ ನೆರವು ಸಾಮಗ್ರಿಗಳೊಂದಿಗೆ 400 ಟ್ರಕ್‌ಗಳು ಗಾಜಾ ಪ್ರವೇಶಿಸಲಿದ್ದು ಬಳಿಕದ ದಿನಗಳಲ್ಲಿ ಟ್ರಕ್‌ಗಳ ಸಂಖ್ಯೆ ಹೆಚ್ಚಲಿದೆ ಎಂದು ಹಮಾಸ್‌ ಹೇಳಿದೆ

ನಡೆಯದ ನೇರ ಮಾತುಕತೆ

ಕೈರೊದಲ್ಲಿ ನಡೆದ ಮೂರು ದಿನಗಳ ಮಾತುಕತೆ ವೇಳೆ ಹಮಾಸ್‌ ಮತ್ತು ಇಸ್ರೇಲ್‌ ನಿಯೋಗಗಳ ಸದಸ್ಯರು ಪರಸ್ಪರ ಭೇಟಿಯಾಗಲಿಲ್ಲ. ಎರಡೂ ನಿಯೋಗಗಳಿಗೆ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿತ್ತು. ಈಜಿಪ್ಟ್‌ ಮತ್ತು ಕತಾರ್‌ನ ಸಂಧಾನಕಾರರು ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದರು. ಶಾಂತಿ ಯೋಜನೆಗೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ ಬಳಿಕ ಹಮಾಸ್‌ ನಿಯೋಗದ ಸದಸ್ಯರು ಟರ್ಕಿ ಕತಾರ್‌ ಈಜಿಪ್ಟ್‌ ಮತ್ತು ಅಮೆರಿಕದ ಸಂಧಾನಕಾರರು ಪರಸ್ಪರ ಅಭಿನಂದಿಸಿದ ದೃಶ್ಯಗಳನ್ನು ಸ್ಥಳೀಯ ಸುದ್ದಿ ವಾಹಿನಿ 'ಅಲ್‌-ಖಹೆರಾ' ಪ್ರಸಾರ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries